ಬಿಜೆಪಿ ಸಂಸದ ಬೃಜ್ಭೂಷನ್ ವಿರುದ್ಧ ಕೊನೆಗೂ ಎಫ್ಐಆರ್
ಹೊಸದಿಲ್ಲಿ ಎ.29: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಕೊನೆಗೂ ಎಫ್ಐಆರ್ ದಾಖಲಾಗಿದೆ.
ಲೈಂಗಿಕ ಕಿರುಕುಳ ನೀಡಿರುವ ವಿರುದ್ಧ ಪ್ರಕರಣ ದಾಖಲಿಸುವಂತೆ ದೇಶದ ಅಗ್ರ ಕುಸ್ತಿಪಟುಗಳು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಇದೀಗ ಮನವಿಯ ಒಂದು ವಾರದ ಬಳಿಕ ಕೊನೆಗೂ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಸೇರಿದಂತೆ ಏಳು ಮಂದಿ ಮಹಿಳಾ ಕುಸ್ತಿಪಟುಗಳು ಬೃಜ್ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಸುವಿಕೆ ಆರೋಪ ಹೊರಿಸಿದ್ದರು. ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ ಕಾರಣದಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ ಕುಸ್ತಿಪಟುಗಳು ಸುಪ್ರೀಂಕೋರ್ಟ್ನ ಮೆಟ್ಟಿಲೇರಿದ್ದರು.
ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಮಾಡಿರುವ ಆರೋಪದ ಬಗ್ಗೆ ಪೋಕ್ಸೋ ಕಾಯ್ದೆಯಡಿ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಸಂಬಂಧದ ಭಾರತೀಯ ದಂಡಸಂಹಿತೆಯ ಸೂಕ್ತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಎರಡನೇ ಎಫ್ಐಆರ್ನಲ್ಲಿ ಇತರ ಮಹಿಳಾ ಕುಸ್ತಿಪಟುಗಳು ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಈ ವಿಚಾರವಾಗಿ ನಿನ್ನೆ ದೆಹಲಿ ಪೊಲೀಸರು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿ ಎಫ್ಐಆರ್ ದಾಖಲಿಸುವ ಭರವಸೆ ನೀಡಿದ್ದರು.
ಕುಸ್ತಿಪಟುಗಳು ಜನವರಿಯಲ್ಲಿ ಕ್ರೀಡಾ ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್, ಕುಸ್ತಿಪಟುಗಳು ನ್ಯಾಯ ಪಡೆಯಲಿದ್ದಾರೆ ಎಂದು ಭರವಸೆ ನೀಡಿ, ಮೇಲ್ವಿಚಾರಣಾ ಸಮಿತಿ ನೇಮಕ ಮಾಡಿತ್ತು. ಮೂರು ತಿಂಗಳು ಕಳೆದರೂ ಈ ಸಮಿತಿಯ ನೇಮಕವನ್ನು ಬಹಿರಂಗಪಡಿಸದ ಹಿನ್ನೆಲೆಯಲ್ಲಿ ಭಾನುವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯಲ್ಲಿ ಟೋಕಿಯೊ ಒಲಿಂಪಿಕ್ಸ್ 2020ರ ಪದಕ ವಿಜೇತೆ ಬಜರಂಗ್ ಪೂನಿಯಾ, ರಿಯೊ 2016ರ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ವಿಶ್ವಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗತ್ ಸೇರಿದಂತೆ ಹಲವು ಮಂದಿ ಕುಸ್ತಿಪಟುಗಳು ಭಾಗವಹಿಸಿದ್ದಾರೆ.