ಮಂಗಳೂರು ಪ್ರಸಾದ್ ನೇತ್ರಾಲಯ: ಎ.30 ಮೆಳ್ಳೆಗಣ್ಣು ಓರೆಗಣ್ಣು ತಪಾಸಣಾ ಶಿಬಿರ
ಮಂಗಳೂರು ಎ.28(ಉಡುಪಿ ಟೈಮ್ಸ್ ವರದಿ): ಇಲ್ಲಿನ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ಎ.30 ರಂದು ‘ಮೆಳ್ಳೆಗಣ್ಣು ಓರೆಗಣ್ಣು ತಪಾಸಣೆ ಮತ್ತು ಮಕ್ಕಳ ಕಣ್ಣಿನ ತಪಾಸಣಾ ಶಿಬಿರ’ವನ್ನು ಆಯೋಜಿಸಲಾಗಿದೆ.
ಈ ಶಿಬಿರವನ್ನು ಮೆಳ್ಳೆಗಣ್ಣು ಮತ್ತು ಮಕ್ಕಳ ಕಣ್ಣಿನ ಖ್ಯಾತ ತಜ್ಞರಾದ ಡಾ. ಶಿಲ್ಪಾ ಜಿ. ರಾವ್ ಅವರು ನಡೆಸಿ ಕೊಡಲಿದ್ದಾರೆ. ಶಿಬಿರವು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಶಿಬಿರದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯತೆ ಕಂಡುಬಂದವರಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ನಡೆಸಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೆಳ್ಳೆಗಣ್ಣು ಜನ್ಮಜಾತವಾಗಿ ಕೆಲವು ಮಕ್ಕಳಲ್ಲಿ ಕಂಡುಬರುವ ತೊಂದರೆಯಾಗಿದೆ ಕಣ್ಣಿನ ಮಾಂಸಖಂಡಗಳು ದುರ್ಬಲವಾಗಿರುವುದು ಮೆಳ್ಳೆಗಣ್ಣಿಗೆ ಒಂದು ಪ್ರಮುಖ ಕಾರಣವಾಗಿದೆ. ಮೆಳ್ಳೆಗಣ್ಣು ಎಂಬುದು ಅದೃಷ್ಟದ ಲಕ್ಷಣ ಎಂಬ ಮೂಢ ನಂಬಿಕೆ ಇದ್ದು, ಈ ತೊಂದರೆ ಇರುವವರು ಕಣ್ಣಿನ ಚಿಕಿತ್ಸೆಗೆ ಹೋಗದೆ ಇರುತ್ತಾರೆ. ಇದರಿಂದ ಮುಂದೆ ಕಣ್ಣಿನ ದೃಷ್ಟಿಗೆ ತೊಂದರೆ ಆಗುವ ಸಾಧ್ಯತೆಯೂ ಇರುತ್ತದೆ.
ಮೆಳ್ಳೆಗಣ್ಣು ಸಂಪೂರ್ಣವಾಗಿ ಗುಣಪಡಿಸಬಹುದಾದ ತೊಂದರೆಯಾಗಿದ್ದು, ಮಗು ಹುಟ್ಟಿದ ಮೊದಲ ಕೆಲವು ವರ್ಷಗಳಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ದೃಷ್ಟಿಗೆ ಉಂಟಾಗುವ ಅಪಾಯಗಳನ್ನು ತಡೆಗಟ್ಟಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.