ಸಿದ್ದರಾಮಯ್ಯ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ- ಇಕ್ಕಟ್ಟಿನಲ್ಲಿ ಕಾಂಗ್ರೆಸ್
ಬೆಂಗಳೂರು: ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಾಚಾರ ಎಸಗಿ ರಾಜ್ಯವನ್ನು ಹಾಳು ಮಾಡಿದ್ದಾರೆಂಬ ಸಿದ್ದರಾಮಯ್ಯ ಅವರ ಹೇಳಿಕೆ ಕಾಂಗ್ರೆಸ್’ಗೆ ಮುಳುವಾಗುವ ಸಾಧ್ಯತೆ ತಲೆದೋರುತ್ತಿದ್ದು, ಬಿಜೆಪಿ ಕೈಗೆ ತಾನಾಗಿಯೇ ಅಸ್ತ್ರವನ್ನು ನೀಡಿದಂತಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂದು ಪ್ರಶ್ನೆಗೆ ಉತ್ತರಿಸಿದ್ದ ಸಿದ್ದರಾಮಯ್ಯ ಅವರು, ಈಗ ಲಿಂಗಾಯತ ಮುಖ್ಯಮಂತ್ರಿಯೇ ಇದ್ದಾರಲ್ಲಾ. ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು ಎಂದು ಹೇಳಿದ್ದರು. ಈ ಹೇಳಿಕೆಯನ್ನೇ ಇದೀಗ ಬಿಜೆಪಿ ಅಸ್ತ್ರವಾಗಿಸಿ ಕೊಂಡಿದ್ದು, ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದೆ. ಕೇವಲ ಬಿಜೆಪಿ ನಾಯಕರಷ್ಟೇ ಅಲ್ಲದೆ, ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಸಂಘ ಸಂಸ್ಥೆಗಳೂ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಸವ ಜಯಂತಿ ದಿನದ ಮುನ್ನಾ ದಿನವೇ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದು, ಜಯಂತಿ ದಿನವಾದ ಭಾನುವಾರ ರಾಜ್ಯದ ವಿವಿಧೆಡೆ ವಿರೋಧದ ಹೇಳಿಕೆಗಳು ಕೇಳಿ ಬಂದವು. ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದರೂ, ಇದರಿಂದ ಯಾವುದೇ ಪ್ರಯೋಜನಗಳಾಗಿಲ್ಲ. ಈ ನಡುವೆ ಹೇಳಿಕೆ ಕುರಿತು ಸಿದ್ದರಾಮಯ್ಯ ಕ್ಷಮೆಯಾಚಿಸಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಈ ಹಿಂದೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನಕ್ಕಾಗಿ ಸಮುದಾಯವನ್ನು ಒಡೆಯಲು ಯತ್ನಿಸಿದ್ದ ಸಿದ್ದರಾಮಯ್ಯ ಈಗ ಸಮಾಜವನ್ನು ಭ್ರಷ್ಟರನ್ನಾಗಿಸಿರುವುದು ಅಕ್ಷಮ್ಯ ಎಂದು ಬಿಜೆಪಿ ಹೇಳಿದೆ. ಇದು ಕಾಂಗ್ರೆಸ್ ಸಂಸ್ಕೃತಿಯಾಗಿದ್ದು, ವೀರಶೈವ ಲಿಂಗಾಯತರನ್ನು ದ್ವೇಷಿಸುವುದು ಅವರ ರಕ್ತದಲ್ಲಿಯೇ ಇದೆ ಎಂದು ಹೇಳಿದೆ. ಈ ನಡುವೆ ಪಕ್ಷಕ್ಕಾಗುತ್ತಿರವ ಡ್ಯಾಮೇಜ್ ಕಂಟ್ರೋಲ್ ಮಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಸಮುದಾಯದ ವಿಶ್ವಾಸವನ್ನು ಗಳಿಸಲು ಕೂಡಲಸಂಗಮದಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಭಾಗವಹಿಸಿದರು.
ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ ಅವರು, ಸಿದ್ದರಾಮಯ್ಯ ಅವರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಇದೇ ವೇಳೆ, ಪಂಚಮಸಾಲಿ ಲಿಂಗಾಯತ ಪೀಠಾಧಿಪತಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಪರಾಮರ್ಶಿಸಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
”ಲಿಂಗಾಯತ ಸಮಾಜದ ಮುಖಂಡರಾದ ಎಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮತ್ತು ಜೆಎಚ್ ಪಟೇಲ್ ಉತ್ತಮ ಆಡಳಿತ ನೀಡಿದ್ದಾರೆ. ಸಮುದಾಯದಲ್ಲಿ ಯಾರಾದರೂ ಭ್ರಷ್ಟರಾಗಿದ್ದರೆ, ಸಮುದಾಯವನ್ನು ಭ್ರಷ್ಟ ಎಂದು ಹೇಳುವುದು ಸರಿಯಲ್ಲ ಎಂದರು.