ಬೈಂದೂರು: ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮಹಿಳೆ ಸಾವು
ಬೈಂದೂರು: ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ಪುಟ್ಟಿ ಮರಾಠಿ(85) ಮೃತಪಟ್ಟ ಮಹಿಳೆ. 15 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಇವರು, ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾ.9 ರಂದು ಮಧ್ಯಾಹ್ನದ ವರೆಗೆ ಮನೆಯಲ್ಲಿದ್ದ ಇವರು ಬಳಿಕ ಕಾಣದೇ ಇದ್ದು ಮನೆ ಮಂದಿ ಹುಡುಕಾಟ ನಡೆಸಿದ್ದಾರೆ. ಆದರೆ ಪುಟ್ಟಿ ಅವರು ಎಲ್ಲಿಯೂ ಪತ್ತೆಯಾಗಿರಲಿಲ್ಲ.
ಬಳಿಕ ಮಾ.11 ರಂದು ಮನೆಯ ಹತ್ತಿರ ಇದ್ದ ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ಹೊಳೆಯ ಮಧ್ಯದಲ್ಲಿ ಪುಟ್ಟಿ ಮರಾಠಿಯವರ ಮೃತದೇಹ ಪತ್ತೆಯಾಗಿದೆ. ಪುಟ್ಟಿ ಮರಾಠಿಯವರು ಮೊದಲಿನಿಂದಲೂ ಮಾನಸಿಕ ಖಾಯಿಲೆಯಿಂದ ಬಳುಲುತ್ತಿದ್ದ ಪರಿಣಾಮ ಹೊಳೆಯನ್ನು ದಾಟಿಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.