ಶಿಕಾರಿಪುರ: ಹಿಂಸೆಗೆ ತಿರುಗಿದ ಬಂಜಾರ ಸಮುದಾಯದ ಪ್ರತಿಭಟನೆ- ನಿಷೇಧಾಜ್ಞೆ ಜಾರಿ
ಶಿವಮೊಗ್ಗ ಮಾ.27 :ಎಸ್ಸಿ-ಎಸ್ಟಿ ಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ಲಂಬಾಣಿ ಸಮುದಾಯದವರು ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಚಪ್ಪಲಿ ತೂರಾಟ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ನೂತನ ಮೀಸಲಾತಿ ರದ್ದುಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಪ್ರತಿಭಟನೆ ನಡೆದಿದ್ದು, ಸದಾಶಿವ ವರದಿ ಜಾರಿಗೊಳಿಸಿದ್ದಕ್ಕೆ ಪ್ರತಿಭಟನಾಕಾರರು ತೀವ್ರ ವಿರೋಧವನ್ನು ವ್ಯಕ್ತಪಡಿಸಿ ಶಿಕಾರಿಪುರದ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ ಭಾವಚಿತ್ರ ದಹಿಸಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದಾರೆ.
ಒಂದು ಹಂತದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಪೊಲೀಸರ ಸೂಚನೆ ಧಿಕ್ಕರಿಸಿ, ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಉದ್ರಿಕ್ತಗೊಂಡ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಕಲ್ಲು ತೂರಾಟದಿಂದ ಕೆಲವು ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಹೆಚ್ಚಿನ ಸಿಬ್ಬಂದಿಯನ್ನು ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.