ರಾಹುಲ್ ಅನರ್ಹ: ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸಿದ ಸಂಸದರು

ನವದೆಹಲಿ ಮಾ.27 : ರಾಹುಲ್ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಸಂಸದರು ಕಪ್ಪು ಬಟ್ಟೆ, ಕಪ್ಪು ಪಟ್ಟಿ ಧರಿಸಿ ಸಂಸತ್ತಿಗೆ ಆಗಮಿಸಿ ಬಳಿಕ ಗಾಂಧಿ ಪ್ರತಿಮೆ ಬಳಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಂರಕ್ಷಿಸಲು ಯಾರಾದರೂ ಮುಂದೆ ಬಂದರೆ ಅವರನ್ನು ನಾವು ಸ್ವಾಗತಿಸುತ್ತೇವೆ. ಸತ್ಯ ಹೊರ ಬರ ಬೇಕೆಂದು ನಾವು ಬಯಸುತ್ತೇವೆ. ಅದಾನಿ ಆಸ್ತಿ ಎರಡೂವರೆ ವರ್ಷಗಳಲ್ಲಿ ಹೆಚ್ಚಾಗಲು ಕಾರಣ ಏನಿರಬಹುದು? ಅವರಲ್ಲಿ ಮಾಟ ಮಂತ್ರವಿದ್ದರೆ ಅದನ್ನು ನಾಗರಿಕರಿಗೂ ತಿಳಿಸಲು ಬಯಸುತ್ತೇವೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯಾದ್ದಲ್ಲಿ ಆ ಮ್ಯಾಜಿಕ್ ಬಗ್ಗೆ ನಮಗೆ ಮತ್ತು ಜನರಿಗೆ ತಿಳಿಯುತ್ತದೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಸಮಾನ ಮನಸ್ಕ ವಿಪಕ್ಷಗಳ ಸಂಸದರು ಸಂಸತ್ತಿನ ಸಂಕೀರ್ಣದಲ್ಲಿ ಇಂದು ಸಭೆ ನಡೆಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಮತ್ತು ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ.

ಈ ವೇಳೆ ಡಿಎಂಕೆ, ಸಮಾಜವಾದಿ ಪಕ್ಷ, ಜೆಡಿ (ಯು), ಬಿಆರ್‍ಎಸ್, ಸಿಪಿಐ (ಎಂ), ಸಿಬಿಐ, ಆರ್‍ಜೆಡಿ, ಎನ್‍ಸಿಪಿ, ಐಯುಎಂಎಲ್, ಎಂಡಿಎಂಕೆ, ಕೇರಳ ಕಾಂಗ್ರೆಸ್, ಟಿಎಂಸಿ, ಆರ್‍ಎಸ್‍ಪಿ, ಎಎಪಿ, ಎನ್‍ಪಿ ಮತ್ತು ಶಿವಸೇನ (ಯುಬಿಟಿ) ಪಕ್ಷಗಳ ನಾಯಕರು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!