ಬಟ್ಟೆ ಅಂಗಡಿಯಲ್ಲಿ ಅಗ್ನಿ ಆಕಸ್ಮಿಕ: ದಂಪತಿ ಸಜೀವ ದಹನ
ಯಾದಗಿರಿ ಮಾ.27 : ಇಂದು ಬೆಳಗ್ಗಿನ ಜಾವ ಬಟ್ಟೆ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ದಂಪತಿಗಳಿಬ್ಬರು ಸಜೀವ ದಹನವಾಗಿರುವ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದಿದೆ.
ರಾಗಯ್ಯ(39) ಹಾಗೂ ಶಿಲ್ಪಾ (35) ಮೃತ ದಂಪತಿಗಳು. ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಆಕಸ್ಮಿಕದಿಂದಾಗಿ ದಟ್ಟ ಹೊಗೆ ಆವರಿಸಿದ ಪರಿಣಾಮ ಮನೆಯಿಂದ ಹೊರಬರಲು ಸಾಧ್ಯವಾಗದೇ ರಾಗಯ್ಯ ದಂಪತಿ ಮೃತಪಟ್ಟಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಮನೆಯಲ್ಲಿದ್ದ ಮಕ್ಕಳು ಹಾಗೂ ರಾಗಯ್ಯ ಅವರ ಪೋಷಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಅಗ್ನಿ ಅವಘಡದಿಂದಾಗಿ ಈಗಾಗಲೇ ನಾಲ್ಕು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬೆಲೆಬಾಳುವ ಬಟ್ಟೆಗಳು ಸುಟ್ಟು ಕರಕಲಾಗಿವೆ.
ಸೈದಾಪುರದಲ್ಲಿ ಕಳೆದ ಅನೇಕ ವರ್ಷಗಳಿಂದ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ಈ ದಂಪತಿಯು ಬಟ್ಟೆ ಅಂಗಡಿಯಿದ್ದ ಕಟ್ಟಡದಲ್ಲಿಯೇ ಮನೆ ಕೂಡ ಹೊಂದಿದ್ರು. ಅಶೋಕಯ್ಯ ಕಾಳಬೆಳಗುಂದಿ ಎಂಬವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡದಲ್ಲಿ ಕೆಳಗಿನ ಎರಡು ಅಂತಸ್ತು ಬಟ್ಟೆ ಅಂಗಡಿಯಾಗಿದ್ದರೆ ಮೂರನೇ ಮಹಡಿಯಲ್ಲಿ ಇವರ ಕುಟುಂಬ ವಾಸವಿತ್ತು ಎನ್ನಲಾಗಿದೆ. ಈ ಬಗ್ಗೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.