ಗೊಂದಲದ ನಡುವೆ ಇಂದಿನಿಂದ 5 ಮತ್ತು 8 ನೇ ತರಗತಿ ಬೋರ್ಡ್ ಪರೀಕ್ಷೆ
ಬೆಂಗಳೂರು ಮಾ.27 : ಸುಪ್ರೀಂ ಕೋರ್ಟ್ ವಿಚಾರಣೆ ನಡುವೆಯೇ ಇಂದಿನಿಂದ ಇದೇ ಮೊದಲ ಬಾರಿಗೆ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಆರಂಭವಾಗಿವೆ.
ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 5, 8ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಯಲಿದೆ. 5ನೇ ತರಗತಿ ಮಕ್ಕಳಿಗೆ ಇಂದಿನಿಂದ ಮಾ.30ರವರೆಗೆ ಪರೀಕ್ಷೆ ನಡೆಯಲಿದೆ. ಹಾಗೂ 8ನೇ ತರಗತಿ ಮಕ್ಕಳಿಗೆ ಏಪ್ರಿಲ್ 1ರವರೆಗೆ ಪರೀಕ್ಷೆ ನಡೆಯಲಿದೆ.
ಇತ್ತ ಒಂದೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದರೆ ಮತ್ತೊಂದೆಡೆ ಈ ವಿಚಾರವಾಗಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ. ಆಯಾ ಶಾಲೆಗಳೇ ಪರೀಕ್ಷಾ ಕೇಂದ್ರಗಳಾಗಿದ್ದು, ಸುಮಾರು 20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎಂದು ತಿಳಿದು ಬಂದಿದೆ.
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನವೊಂದಕ್ಕೆ ಒಂದು ವಿಷಯದಂತೆ ಮೌಲ್ಯಾಂಕನ ನಡೆಸಲಾಗುತ್ತದೆ. ಪ್ರತಿ ವಿಷಯದ ಮೌಲ್ಯಂಕನಕ್ಕೆ ಎರಡು ಗಂಟೆಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ತರಗತಿವಾರು ಪ್ರತಿ ವಿಷಯಕ್ಕೆ 40 ಅಂಕಗಳ ಲಿಖಿತ ಮೌಲ್ಯಾಂಕನಕ್ಕೆ 28 ಪ್ರಶ್ನೆಗಳನ್ನೊಳಗೊಂಡ 1 ಅಂಕದ 20 ಬಹುಆಯ್ಕೆ ಪ್ರಶ್ನೆಗಳು, 2 ಅಂಕಗಳ 5, 3 ಅಂಕಗಳ 2 ಹಾಗೂ 4 ಅಂಕಗಳ 1 ವಿವರಣಾತ್ಮಕ ಪ್ರಶ್ನೆಗಳು ಪ್ರತ್ಯಕ ಪ್ರಶ್ನೋತ್ತರ ಪತ್ರಿಕೆಯನ್ನು ನೀಡಲಾಗುತ್ತದೆ. 10 ಅಂಕಗಳ ಮೌಖಿಕ ಮೌಲ್ಯಾಂಕನವನ್ನು ಶಾಲಾ ಹಂತದಲ್ಲಿಯೇ ನಿರ್ವಹಿಸಲು ತಿಳಿಸಲಾಗಿದೆ. 40 ಅಂಕಗಳ ಲಿಖಿತ ಮೌಲ್ಯಾಂಕನ ಮತ್ತು 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.