ಅಕ್ರಮ ಬಂಧನದಲ್ಲಿಟ್ಟು 40 ಲಕ್ಷಕ್ಕೆ ಬೇಡಿಕೆ: ಪಿಎಸ್‍ಐ, ಕಾನ್ಸ್ಟೇಬಲ್‍ಗಳ ಬಂಧನಕ್ಕೆ 2ತಂಡ ರಚನೆ

ಬೆಂಗಳೂರು ಮಾ.25 : 40 ಲಕ್ಷಕ್ಕೆ ಬೇಡಿಕೆ ಇರಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾರತ್ತಹಳ್ಳಿ ಠಾಣೆಯ ಪಿಎಸ್‍ಐ ಮತ್ತು ಕಾನ್ಸ್ಟೇಬಲ್‍ಗಳ ಬಂಧನಕ್ಕೆ ಪೊಲೀಸರು 2 ಪ್ರತ್ಯೇತ ತಂಡಗಳನ್ನು ರಚಿಸಿದ್ದಾರೆ.

ಮಾರತ್ತಹಳ್ಳಿ ಠಾಣೆಯ ಪಿಎಸ್‍ಐ ರಂಗೇಶ್ ಹಾಗೂ ಕಾನ್‍ಸ್ಟೆಬಲ್‍ಗಳಾದ ಮಹದೇವಸ್ವಾಮಿ, ಮಹೇಶ್ ತಲೆಮರೆಸಿಕೊಂಡಿರುವ ಪ್ರಕರಣದ ಆರೋಪಿಗಳಾಗಿದ್ದಾರೆ.

‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ರಂಗೇಶ್ ಹುಟ್ಟೂರಿಗೂ ವಿಶೇಷ ತಂಡ ತೆರಳಿದೆ ಆದರೆ, ಪಿಎಸ್‍ಐ ಬಂಧನ ಭೀತಿಯಿಂದ ನಗರದಿಂದ ನಗರಕ್ಕೆ ಸ್ಥಳ ಬದಲಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

‘ಹುಲಿ ಚರ್ಮ, ಉಗುರು ಮಾರಾಟ ನೆಪದಲ್ಲಿ ರಾಮಾಂಜನಿ ಅವರನ್ನು ವಶಕ್ಕೆ ಪಡೆದಿದ್ದ ಪಿಎಸ್‍ಐ ಹಾಗೂ ಇತರರು, ಅಕ್ರಮ ಬಂಧನದಲ್ಲಿಟ್ಟು 40 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಪ್ರಮುಖ ಆರೋಪಿ ರಂಗೇಶ್ ಹಾಗೂ ಕಾನ್‍ಸ್ಟಬಲ್‍ಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ’ ಎಂದು ಬಾಗಲೂರು ಪೊಲೀಸರು ತಿಳಿಸಿದ್ದಾರೆ

ಬಾಗಲೂರು ಠಾಣೆಯಲ್ಲಿ ದಾಖಲಾಗಿದ್ದ ರಾಮಾಂಜನಿ ಎಂಬುವವರ ಅಪಹರಣ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು, ಮಾರತ್ತಹಳ್ಳಿ ಠಾಣೆಯ ಹೆಡ್ ಕಾನ್‍ಸ್ಟೆಬಲ್ ಹರೀಶ್ ಸೇರಿ ಮೂವರನ್ನು ಈಗಾಗಲೇ ಬಂಧಿಸಿದ್ದಾರೆ.

ವಂಚನೆ ಪ್ರಕರಣ ದಾಖಲು: ‘ನಕಲಿ ಚರ್ಮ, ಉಗುರುಗಳನ್ನು ಅಸಲಿ ಎಂಬುದಾಗಿ ಬಿಂಬಿಸಿ ಸಾರ್ವಜನಿಕರಿಗೆ ಮಾರಲು ಯತ್ನಿಸುತ್ತಿದ್ದ ಆರೋಪದಡಿ ಸಿದ್ದಮಲ್ಲಪ್ಪ ಹಾಗೂ ರಾಮಾಂಜನಿ ವಿರುದ್ಧ ಮಾರತ್ತಹಳ್ಳಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಅದರ ವಿಚಾರಣೆ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!