ಹಿಂದುಳಿದ ವರ್ಗದ ಪಟ್ಟಿಯಲ್ಲಿ ಮುಸ್ಲಿಮರಿಗಿದ್ದ 2B ಮೀಸಲಾತಿ ರದ್ದು: ಸಿಎಂ ಬೊಮ್ಮಾಯಿ
ಬೆಂಗಳೂರು, ಮಾ.24: ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಇದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಈ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮುಸ್ಲಿಮರಿಗೆ ಹಿಂದುಳಿದ ವರ್ಗದ ಪಟ್ಟಿಯಲ್ಲಿ 2 ಬಿ ಅಡಿಯಲ್ಲಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಲಾಗಿದೆ. ಈ ಮೀಸಲಾತಿ ಪ್ರಮಾಣವನ್ನು 2ಡಿ ವರ್ಗದಲ್ಲಿ ಬರುವ ವೀರಶೈವ ಲಿಂಗಾಯತರಿಗೆ ಶೇ.2ರಷ್ಟು ಹಾಗೂ 2ಸಿ ಅಡಿಯಲ್ಲಿರುವ ಒಕ್ಕಲಿಗ ಜನಾಂಗಗಕ್ಕೆ ಶೇ.2ರಷ್ಟು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಹೊಸದಾಗಿ ಸೃಜಿಸಲಾದ ಪ್ರವರ್ಗ 2ಡಿ ಅಡಿಯಲ್ಲಿ ಲಿಂಗಾಯತರಿಗೆ ಶೇ.5 ರಿಂದ ಶೇ.7ಕ್ಕೆ ಹಾಗೂ 2ಸಿ ಅಡಿಯಲ್ಲಿ ಒಕ್ಕಲಿಗರಿಗೆ ಶೇ.4ರಿಂದ 6ಕ್ಕೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಅದೇ ರೀತಿ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ನೀಡುವ ಮೀಸಲಾತಿಯಲ್ಲಿ ಮುಸ್ಲಿಮರನ್ನು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ಹೊಸ ಲೆಕ್ಕಾಚಾರ ಪ್ರಕಾರ, ಒಕ್ಕಲಿಗ ಮೀಸಲಾತಿ ಪ್ರಮಾಣ ಶೇ.4ರಿಂದ 6ಕ್ಕೇರಲಿದೆ. ವೀರಶೈವ ಪಂಚಮಸಾಲಿ ಮೀಸಲಾತಿ ಪ್ರಮಾಣ 5ರಿಂದ 7 ಶೇಕಡಾಕ್ಕೇರಲಿದೆ. ಧಾರ್ಮಿಕ ಸಮುದಾಯದವರಿಗೆ ಹಿಂದುಳಿದ ವರ್ಗದ ಅಡಿಯಲ್ಲಿ ಮೀಸಲಾತಿ ನೀಡಲು ಅವಕಾಶವಿಲ್ಲ. ಹಾಗಾಗಿ 2 ಬಿ ಅನ್ನು ರದ್ದುಪಡಿಸಲಾಗಿದೆ. ಆದರೂ, ಅವರಿಗೆ ಅನ್ಯಾಯವಾಗಬಾರದು ಎಂದು ಇಡಬ್ಲ್ಯೂಎಸ್ ಕೋಟಾದ ಶೇಕಡ 10ರಷ್ಟು ಮೀಸಲಾತಿ ಗುಂಪಿಗೆ ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇನ್ನು ಮುಂದೆ 2ಬಿ ಪ್ರವರ್ಗ ಇರುವುದಿಲ್ಲ. 2ಬಿ ಎಂದರೆ ಇದುವರೆಗೆ ಧಾರ್ಮಿಕ ಅಲ್ಪಸಂಖ್ಯಾತರಿಗೆ(ಮುಸ್ಲಿಮರು) ಇದ್ದ ಮೀಸಲಾತಿ. ಮುಂದೆ ಪ್ರವರ್ಗ 2 (ಅತ್ಯಂತ ಹೆಚ್ಚು ಹಿಂದುಳಿದವರು), 2ಎ (ಹಿಂದುಳಿದವರು), 2ಬಿ (ಅಲ್ಪಸಂಖ್ಯಾತರು) ಹಾಗೂ 3ಎ (ಒಕ್ಕಲಿಗ ಮತ್ತು ಇತರರು) ಮತ್ತು 3 ಬಿ (ವೀರಶೈವ ಪಂಚಮಸಾಲಿ ಮತ್ತು ಇತರರು) ಇತ್ತು. ಈಗ 2, 2ಎ, 2ಸಿ (ಒಕ್ಕಲಿಗ ಮತ್ತು ಇತರರು) ಮತ್ತು 2 ಡಿ (ವೀರಶೈವ ಪಂಚಮಸಾಲಿ ಮತ್ತು ಇತರರು) ಎಂಬ ಮೀಸಲಾತಿಗಳು ಇರಲಿವೆ ಎಂದು ಅವರು ವಿವರಿಸಿದರು.
ಧಾರ್ಮಿಕ ಅಲ್ಪಸಂಖ್ಯಾತರಿಗೆ 7 ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ. 2ಬಿ ಅಡಿ ಮೀಸಲಾತಿಯೂ ನೀಡಿಲ್ಲ. ಸ್ವಾತಂತ್ರ್ಯ ನಂತರ ಇಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕಾಲ ಕಾಲಕ್ಕೆ ಹಲವು ನಿರ್ಣಯ ಕೈಗೊಂಡು ಹಲವು ಸಮಿತಿಗಳನ್ನು ರಚಿಸಲಾಗಿದೆ. ಆದರೆ ಸಮಿತಿಗಳ ಶಿಫಾರಸುಗಳನ್ನು ಜಾರಿ ಮಾಡಿರಲಿಲ್ಲ. ಇನ್ನೂ, ಹಿಂದುಳಿದ ವರ್ಗದಲ್ಲಿ ಒಂದೇ ವರ್ಗೀಕರಣ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.