ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಯಾರು?

ಅಹಮದಾಬಾದ್ ಮಾ.24 : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸೂರತ್ ಕೋರ್ಟ್ ತೀರ್ಪು ನೀಡಿದ ಬಳಿಕ ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.

ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದಲ್ಲಿನ ಎಲ್ಲಾ ವಂಚಕರ(ಲಲಿತ್ ಮೋದಿ, ನೀರವ್ ಮೋದಿ) ಸರ್ ನೇಮ್ (ಉಪನಾಮ) ಮೋದಿ ಅಂತ ಇರುವುದೇಕೆ? ಎಂದು ಪ್ರಶ್ನಿಸಿದ್ದರು. ಇದರ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅಂದು ದೂರು ದಾಖಲಿಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ಮಾ. 22ರಂದು ಸೂರತ್ ಕೋರ್ಟ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಆದೇಶ ನೀಡಿ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಮತ್ತೊಂದೆಡೆ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಶುಕ್ರವಾರ ಲೋಕಸಭೆ ಸೆಕ್ರೆಟರಿಯೇಟ್, ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದೆ.

ಯಾರಿವರು ಪೂರ್ಣೇಶ್ ಮೋದಿ: ಪೂರ್ಣೇಶ್ ಮೋದಿ (54ವರ್ಷ) ಅವರು ಗುಜರಾತ್ ನ ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದಾರೆ. ಬಡತನದಲ್ಲಿ ಹುಟ್ಟಿ ಬೆಳೆದಿದ್ದ ಪೂರ್ಣೇಶ್ ಮೋದಿ ,ಜೀವನ ನಿರ್ವಹಣೆಗಾಗಿ ಟೀ ಮಾರಾಟದ ಕೆಲಸ ಮಾಡಿದ್ದರು. ದ ಪ್ರಿಂಟ್ ನ್ಯೂಸ್ ಪ್ರಕಾರ, ಸ್ಥಳೀಯ ಕಾನೂನು ಕಚೇರಿಯಲ್ಲಿ ಅರೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದ್ದರು.

ನಿಧಾನಕ್ಕೆ ಕಾನೂನು ಕುರಿತು ಆಸಕ್ತಿ ಹೊಂದಿದ್ದ ಪೂರ್ಣೇಶ್ ಅವರು ಕಾನೂನು ಪದವಿ ಪಡೆದು ವಕೀಲರಾಗಿ ಕಾರ್ಯನಿರ್ವಹಿಸಿದ್ದರು. ಹೀಗೆ ಬಿಜೆಪಿ ಜೊತೆ ಗುರುತಿಸಿಕೊಂಡ ಪೂರ್ಣೇಶ್ ಮೋದಿ ಅವರು ಪಕ್ಷದಲ್ಲಿ ಬೂತ್ ಸಂಚಾಲಕರಾಗಿ, ವಾರ್ಡ್ ಅಧ್ಯಕ್ಷರಾಗಿ, ಸೂರತ್ ಮುನ್ಸಿಪಲ್ ಕಾರ್ಪೊರೇಶನ್ ನ ಕಾರ್ಪೋರೇಟರ್ ಆಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಗೂ ಸೂರತ್ ಘಟಕದ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

2012ರಲ್ಲಿ ಸೂರತ್ ಪಶ್ಚಿಮ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪೂರ್ಣೇಶ್ ಶಾಸಕರಾಗಿ ಆಯ್ಕೆಯಾಗಿದ್ದರು. ಪೂರ್ಣೇಶ್ ಅವರ ಟ್ವೀಟರ್ ಹ್ಯಾಂಡಲ್ ನಲ್ಲಿ ಇರುವ ಮಾಹಿತಿ ಪ್ರಕಾರ,  ಸಾರಿಗೆ ಮತ್ತು ನಾಗರಿಕ ವಿಮಾನ ಖಾತೆ ಮಾಜಿ ಸಚಿವ ಎಂದು ತಿಳಿಸಿದೆ. ಅಷ್ಟೇ ಅಲ್ಲ ಪೂರ್ಣೇಶ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ.

Leave a Reply

Your email address will not be published. Required fields are marked *

error: Content is protected !!