ನಂದಳಿಕೆ ಸಿರಿ ಜಾತ್ರೆ: ಹಕ್ಕಿಗಳಿಗೆ ನೀರುಣಿಸುವ ಮಾದರಿಯ ವಿಶಿಷ್ಟ ಪ್ರಚಾರ
ಬೆಳ್ಮಣ್, ಮಾ.24 : ಪ್ರತಿ ಬಾರಿಯಂತೆ ಈ ಬಾರಿಯು ವಿಭಿನ್ನವಾಗಿ ಎ.6 ರಂದು ನಡೆಯಲಿರುವ ನಂದಳಿಕೆ ಸಿರಿ ಜಾತ್ರೆಯ ಪ್ರಚಾರವನ್ನು ನಡೆಸಲಾಗುತ್ತಿದೆ.
ಈ ಬಾರಿ ನಂದಳಿಕೆಯ ಸುಹಾಸ್ ಹೆಗ್ಡೆ ಅವರು ರಟ್ಟಿನ ಬಾಕ್ಸ್ ನ ಮೇಲೆ ಮಣ್ಣಿನ ಪಾತ್ರೆಯಲ್ಲಿ ನೀರು ಇಟ್ಟು ಹಕ್ಕಿಗಳಿಗೆ ನೀರುಣಿಸುವ ಮೂಲಕ ಪ್ರಚಾರದ ಜತೆ ಪರಿಸರದ ಹಕ್ಕಿಗಳ ಬಾಯಾರಿಕೆ ತಣಿಸುವ ಕಾಯಕ ನಡೆಸಿದ್ದಾರೆ. ಈ ಮೂಲಕ ಸಿರಿ ಜಾತ್ರೆಯ ಪ್ರಚಾರವನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ.
ಈ ವಿಭಿನ್ನ ಪರಿಕಲ್ಪನೆಯನ್ನು ಮಾಧ್ಯಮದ ಮುಂದೆ ಬಿಡುಗಡೆಗೊಳಿಸಿ, ಈ ಬಗ್ಗೆ ಮಾಹಿತಿ ನೀಡಿದ ಸುಹಾಸ್ ಹೆಗ್ಡೆ ಅವರು, ಸಿದ್ದಾಪುರದಲ್ಲಿ ತಯಾರಿಸಲಾದ ಮಣ್ಣಿನ ಪಾತ್ರೆ ಹಾಗೂ ಬೆಂಗಳೂರಿನಲ್ಲಿ ತಯಾರಿಸಿರುವ ನಂದಳಿಕೆ ಸಿರಿ ಜಾತ್ರೆಯ ಬಗ್ಗೆ ಮುದ್ರಿಸಲಾದ ಪೇಪರ್ಬಾಕ್ಸ್ಗೆ ಒಟ್ಟಾರೆ ಸುಮಾರು 120 ರೂ. ವೆಚ್ಚವಾಗಿದೆ. ಈ ರೀತಿಯ 15,000 ದಷ್ಟು ಪ್ರತಿಕೃತಿ ಅಲ್ಲಲ್ಲಿ ಅಳವಡಿಸಲಾಗುವುದು ಎಂದರು.
ಈ ಹಿಂದಿನಂತೆ ರಸ್ತೆಯ ಇಕ್ಕೆಲಗಳಲ್ಲಿ ಮನಬಂದಂತೆ ಅಳವಡಿಸದೆ ಮನೆಯ, ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಅವರವರ ಸುಪರ್ದಿಯಲ್ಲಿ ಜವಾಬ್ದಾರಿ ನೀಡಿ ಅಳವಡಿಸಲಾಗುವುದು. ಆವರು ಈ ಮಣ್ಣಿನ ಪಾತ್ರೆಗೆ ಪಕ್ಷಿಗಳಿಗಾಗಿ ನಿತ್ಯ ನೀರೆರೆಯಲಿದ್ದಾರೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಸಿರಿ ಜಾತ್ರೆ ನಮ್ಮ ಕನಸು, ಮಂಡ್ಯ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಇನ್ನಿತರ ಕಡೆಗಳಿಂದ ಬರುವ ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ನಂದಳಿಕೆಯಲ್ಲಿ ಸ್ವಯಂಪ್ರೇರಿತ ಸ್ಯಂಸೇವಕರ ದಂಡು ಸಿದ್ಧ ಎಂದರು.
ಪ್ರಸ್ತುತ ತಾಪಮಾನ ಗರಿಷ್ಠಮಟಕ್ಕೇರಿದ್ದು ಮನುಷ್ಯರೇ ಕಂಗೆಟ್ಟಿದ್ದಾರೆ, ಹೀಗಿರುವಾಗ ಪಕ್ಷಿ ಸಂಕುಲಕ್ಕೆ ನೀರುಣಿಸುವುದರ ಜತೆಗೆ ಪರಿಸರ ಸ್ನೇಹಿ ಸಿರಿ ಜಾತ್ರೆಯ ಪರಿಕಲ್ಪನೆ ನಮ್ಮದಾಗಿದೆ. ಈ ಕಾರಣಕ್ಕೆ ಈ ಮಾದರಿಯ ಪ್ರಚಾರ ನಡೆಸಲಾಗುತ್ತಿದೆ. ಸಿರಿ ಜಾತ್ರೆಯ ಬಳಿಕವೂ ಈ ಪ್ರತಿಕೃತಿ ಕೊಂಡೊಯ್ದವರು ಪಕ್ಷಿಗಳಿಗೆ ಈ ಮಣ್ಣಿನ ಪಾತ್ರೆಯಲ್ಲಿ ನೀರಿಡಲು ಮರೆಯಬಾರದು ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಮೈಲುಗಲ್ಲು, ಅಂಚೆ ಕಾರ್ಡ್, ಕೊಡೆ, ಅಕ್ಕಿ ಗೋಣಿಚೀಲ, ವೃತ್ತ, ಫೋಟೋ ಪ್ರೇಮ್ನಂತಹ ಪ್ರತಿಕೃತಿಗಳನ್ನು ಬಳಸಿ ಸಿರಿ ಜಾತ್ರೆ ಪ್ರಚಾರ ನಡೆಸುವ ಮೂಲಕ ಸುದ್ದಿಯಾಗಿತ್ತು.