ಅಬ್ಬರದ ಮಹಿಷಾಸುರನ ಪ್ರತಾಪಕ್ಕೆ ಅದುರಿದ ರಂಗಸ್ಥಳ: ಸಾಮಾಜಿಕ ಜಾಲದಲ್ಲಿ ಭಾರಿ ವೈರಲಾದ ಯಕ್ಷಗಾನ ವಿಡಿಯೋ

ಕುಂದಾಪುರ: ಕರಾವಳಿಯ ಗಂಡುಕಲೆ ಯಕ್ಷಗಾನ ಅಂದರೆ ಕರಾವಳಿಗರಿಗೆ ಅಚ್ಚುಮೆಚ್ಚು. ಯಕ್ಷಗಾನದ ವೇಷ ಭೂಷನಗಳು, ಭಾಗವತಿಕೆ, ಮಾತುಗಾರಿಕೆ ಎಲ್ಲವೂ ವಿಭಿನ್ನ ಸಂಸ್ಕೃತಿ ರಸಧಾರೆಯನ್ನು ಹರಿಸುತ್ತದೆ. ಅದರಲ್ಲೂ ದೇವಿ ಮಹಾತ್ಮೆಯಲ್ಲಿ ಬರುವ ಮಹಿಷಾಸುರನ ಪಾತ್ರವಂತೂ ಕರಾವಳಿಯಲ್ಲಿ ತುಂಬಾನೇ ಜನಪ್ರಿಯ. ಯಕ್ಷಗಾನದಲ್ಲಿಯೂ ಇತ್ತೀಚಿನ ಹಲವು ವರ್ಷಗಳಿಂದ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಈ ಹಿಂದಿನಿಂದಲೂ ಯಕ್ಷಗಾನಗದಲ್ಲಿ ಸಾಹಸಮಯ ದೃಶ್ಯಗಳನ್ನು ಇದ್ದರೂ ಕೂಡಾ ಅದನ್ನು ನಾಟಕೀಯವಾಗಿ ತೋರಿಸಲಾಗುತ್ತಿತ್ತು. ಆದರೆ ಫೆ.23 ರಂದು ಕುಂದಾಪುರದಲ್ಲಿ ನಡೆದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನದಲ್ಲಿ ಮಹಿಷಾಸುರ ಪಾತ್ರಧಾರಿ ರಂಗಸ್ಥಳದ ಕಂಬಕ್ಕೆ ತಲೆ ಬಡಿದುಕೊಂಡಿದ್ದು, ಕಂಬ ಅದುರಿದ ಕಾರಣ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು.

ಹೌದು… ಕುಂದಾಪುರದ ಚಿತ್ತೂರಿನಲ್ಲಿ ನಿನ್ನೆ ರಾತ್ರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಈ ಪೆರ್ಡೂರು ಮೇಳದ ಪ್ರದರ್ಶನಕ್ಕೆ ಮಾರಣಕಟ್ಟೆ ಮೇಳದ ಯುವ ಕಲಾವಿದ ನಂದೀಶ್ ಮೊಗವೀರ ಜನ್ನಾಡಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ನಂದೀಶ್ ಅವರು ಮಹಿಷಾಸುರ ವೇಷ ಅಬ್ಬರದ ಪ್ರವೇಶಕ್ಕೆ ಮಾತ್ರವಲ್ಲದೆ, ರಂಗಸ್ಥಳದ ಕಂಬಕ್ಕೆ ತಲೆ ಹೊಡೆದುಕೊಳ್ಳುವ ದೃಶ್ಯಕ್ಕಾಗಿಯೂ ಪ್ರಸಿದ್ದಿ ಪಡೆದುಕೊಂಡಿರುವವರು. ಅದರಂತೆ ಚಿತ್ತೂರಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ದೇವಿಯ ಜತೆಗಿನ ಹೋರಾಟದ ಸನ್ನಿವೇಶದಲ್ಲಿ ಮಹಿಷಾಸುರ ಕಂಬಕ್ಕೆ ತಲೆ ಬಡಿದುಕೊಳ್ಳುವ ದೃಶ್ಯ ನಡೆಯುತ್ತಿತ್ತು. ಈ ವೇಳೆ ರಂಗಸ್ಥಳದ ಒಂದು ಕಂಬಕ್ಕೆ ಅಳವಡಿಸಿದ್ದ ಹೂವಿನ ಅಲಂಕಾರ ಚೆಲ್ಲಾಪಿಲ್ಲಿಯಾಯಿತು. ಇನ್ನೊಂದು ಕಂಬಕ್ಕೆ ಬಡಿದಾಗ ಅದು ಅಲುಗಾಡತೊಡಗಿತು. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಬಳಿಕ ಇದನ್ನು ಗಮನಿಸಿದ ಭಾಗವತರು ರಂಗಸ್ಥಳ ಸಹಾಯಕರಿಗೆ ಸೂಚನೆ ನೀಡಿ ಸರಿಪಡಿಸುವಂತೆ ಹೇಳಿದರು.
ಇದೀಗ ಈ ಮಹಿಷಾಸುರನ ಅಬ್ಬರದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲಾವಿದನ ಅಬ್ಬರದ ಪ್ರದರ್ಶನಕ್ಕೆ ಮೆಚ್ಚುಗೆಯ ಜತೆಗೇ ಕಲಾವಿದನ ಕುರಿತು ಕಾಳಜಿಯ ಮಾತುಗಳೂ ಕೇಳಿ ಬಂದಿವೆ. ಜೀವಕ್ಕೆ ಅಪಾಯ ಆಗುವಂತಹ ಪ್ರದರ್ಶನ ನೀಡಬಾರದು, ದೈಹಿಕ ಆಘಾತವಾಗದಂತೆ ಅಭಿನಯ ನೀಡಬೇಕು. ಇಂತಹ ಪ್ರದರ್ಶನಗಳು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಕಲಾವಿದರ ಕುರಿತು ಕಾಳಜಿಯ ಅಭಿಪ್ರಾಯಗಳು ಅಭಿಮಾನಿಗಳಿಂದ ವ್ಯಕ್ತವಾಗಿದೆ.

ಈ ಬಗ್ಗೆ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಪ್ರತಿಕ್ರಿಯೆ ನೀಡಿ, ಕಲಾವಿದರು ಪ್ರದರ್ಶನ ನೀಡುವಾಗ ದೈಹಿಕ ಶ್ರಮ ಹಾಕಿ ಅಪಾಯವನ್ನು ಆಹ್ವಾನಿಸುವಂತೆ ಆಗಬಾರದು. ಇಂತಹ ದೃಶೈಗಳಲ್ಲಿ ನಿಜವಾಗಿ ಕಂಬಕ್ಕೆ ತಲೆ ಹೊಡೆದು ಕೊಳ್ಳುವ ಬದಲು ಆ ರೀತಿಯ ಅಭಿನಯ ಮಾತ್ರ ಮಾಡುವ ಮೂಲಕ ಕಲಾವಿದ ಜೀವಾಪಾಯ ತಂದುಕೊಳ್ಳದೆ ಪ್ರದರ್ಶನ ನೀಡಬೇಕು ಎಂದು ತಿಳಿಸಿದ್ದಾರೆ.

ಇನ್ನು ಈ ದೃಶ್ಯದ ಬಗ್ಗೆ ಕೆಎಂಸಿಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್ ಪ್ರತಿಕ್ರಿಯೆ ನೀಡಿ, ನಿರಂತರವಾಗಿ ಕಂಬಕ್ಕೆ ತಲೆ ಹೊಡೆದುಕೊಳ್ಳುವುದರಿಂದ ಮೆದುಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಅಭಿಮಾನಿಗಳ ಮೆಚ್ಚುಗೆ ಹಾಗೂ ಕಾಳಜಿಯ ಅಭಿಪ್ರಾಯಕ್ಕೆ ತಲೆಬಾಗಿದ ಕಲಾವಿದ ನಂದೀಶ್ ಜನ್ನಾಡಿ ಅವರು ತಮ್ಮ ಮಹಿಷಾಸುರನ ಪಾತ್ರದ ಅಬ್ಬರದ ಪ್ರದರ್ಶನದ ಬಗ್ಗೆ ಮಾತನಾಡಿ, ಅಪಾಯವಾಗದ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದೇನೆ. ಅನೇಕ ಹಿತೈಷಿಗಳು ಹಿತವಚನ ಹೇಳಿದ್ದು, ಕಲಾಭಿಮಾನಿಗಳಿಗೆ ನಿರಾಸೆಯಾಗದಂತೆ, ವೈಯಕ್ತಿಕವಾಗಿ ತೊಂದರೆ ಮಾಡಿಕೊಳ್ಳದೇ ಪ್ರದರ್ಶನ ನೀಡುವ ಕುರಿತು ಗಮನ ಹರಿಸುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!