ಸರಕು ಸೇವಾ ತೆರಿಗೆ ನಿಬಂಧನೆ ಮರು ಪರಿಶೀಲನಗೆ ಒತ್ತಾಯಿಸಿ ಭಾರತ್ ಬಂದ್ ಗೆ ಫೆ.26 ರಂದು ಕರೆ
ನವದೆಹಲಿ: ಸರಕು ಸೇವಾ ತೆರಿಗೆ ನಿಬಂಧನೆಗಳನ್ನು ಮರುಪರಿಶೀಲನೆ ಮಾಡುವಂತೆ ಅಖಿಲ ಭಾರತ ವರ್ತಕರ ಸಂಘ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಫೆ. 26ರಂದು ಭಾರತ್ ಬಂದ್ಗೆ ಸಂಘ ಕರೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಐಟಿ, ಜಿಎಸ್ಟಿಯಲ್ಲಿ ಕೆಲವು ನಿಯಮಗಳನ್ನು ಬದಲಾಯಿಸಬೇಕು. ಕಠಿಣ ನಿಬಂಧನೆಗಳ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಈ ನಿಟ್ಟಿನಲ್ಲಿ ಜಿಎಸ್ಟಿ ಮಂಡಳಿಯನ್ನು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ಒಟ್ಟು 1500 ಕಡೆಗಳಲ್ಲಿ ಧರಣಿ ನಡೆಸಲಿರುವುದಾಗಿ ತಿಳಿಸಿದೆ.
ಭಾರತ್ ಬಂದ್ ಪ್ರಯುಕ್ತ ದೇಶಾದ್ಯಂತ ಫೆಬ್ರವರಿ 26ರಂದು ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಬಂದ್ ಆಗಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಎಸ್ಟಿ ನಿಯಮಗಳಲ್ಲಿ 950 ತಿದ್ದುಪಡಿಗಳನ್ನು ಮಾಡಲಾಗಿದೆ. ಜಿಎಸ್ಟಿ ಪೋರ್ಟ್ಲ್ ನಲ್ಲಿ ಸಮಸ್ಯೆಗಳು ಹಾಗೂ ಅನುಸರಣೆಯಲ್ಲಿನ ನಿರಂತರ ಸಮಸ್ಯೆಗಳು ತೆರಿಗೆ ನಿಯಮದ ಮೇಲೆ ಪ್ರಭಾವ ಬೀರಿದೆ. ಆದ್ದರಿಂದ ನಿಬಂಧನೆಗಳ ಮರುಪರಿಶೀಲನೆ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಅಖಿಲ ಭಾರತ ವರ್ತಕರ ಸಂಘಟನೆ ಸರಕು ಸೇವಾ ತೆರಿಗೆ ನಿಬಂಧನೆಗಳನ್ನು ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿದೆ. ಹೀಗಾಗಿ ದೇಶಾದ್ಯಂತ ಬಂದ್ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.