ಚಿಕ್ಕಮಗಳೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನ, ಸಾವಿರಾರು ಸೀರೆಗಳು ವಶ
ಚಿಕ್ಕಮಗಳೂರು ಮಾ.23 : ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ಮೌಲ್ಯದ ಚಿನ್ನ ಹಾಗೂ ಮತದಾರರಿಗೆ ಹಂಚಲು ಇಟ್ಟಿದ್ದ ಸಾವಿರಾರು ಸೀರೆಗಳನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತರೀಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಬಾಕ್ಸ್ ನಲ್ಲಿ ಚಿನ್ನವನ್ನ ಸಾಗಿಸುತ್ತಿದ್ದ ಪಿಕಪ್ ವಾಹನ ಸವಾರ ಸೇರಿದಂತೆ ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು, ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ 2 ಕೋಟಿ 30 ಲಕ್ಷ ರೂ. ಬೆಲೆ ಬಾಳುವ 9 ಕೆ.ಜಿ. 300 ಗ್ರಾಂ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಚುನಾವಣೆ ನಿಮಿತ್ತ ಜಿಲ್ಲಾದ್ಯಂತ ಗಡಿಗಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಚಿಕ್ಕಮಗಳೂರಿನ ಜಯನಗರದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು ಮತದಾರರಿಗೆ ಹಂಚಲು ಇಟ್ಟಿದ್ದ ಲಕ್ಷಾಂತರ ಬೆಲೆಬಾಳುವ ಸಾವಿರಾರು ಸೀರೆಗಳನ್ನು ವಶ ಪಡಿಸಿಕೊಂಡಿದ್ದಾರೆ.
ಸೂರತ್ ನ ಸೀರೆ ಫ್ಯಾಕ್ಟರಿಯಿಂದ ಚಂದನ್ ಕುಮಾರ್ ಜೈನ್ ಹೆಸರಿನಲ್ಲಿ ಬಂದಿದ್ದ ಸೀರೆಗಲಾಗಿದ್ದು, ಸೀರೆ ಫ್ಯಾಕ್ಟರಿಗೆ ಫೋನ್ ಮಾಡಿದರೂ ಸೂಕ್ತ ಮಾಹಿತಿ ಸಿಕ್ಕಿಲ್ಲ. ಇದುವರೆಗೂ ಪೊಲೀಸರು, ಅಧಿಕಾರಿಗಳಿಗೆ ಚಂದನ್ ಕುಮಾರ್ ಜೈನ್ ಸಂಪರ್ಕಕ್ಕೆ ಸಿಗಲಿಲ್ಲ. ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿ ತರಿಸಿದ್ದ ಲಕ್ಷಾಂತರ ಮೌಲ್ಯದ ಸೀರೆಗಳನ್ನ ವಶಕ್ಕೆ ಪಡೆಡಿರುವ ಪೊಲೀಸರು ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.