ಚಿಂಚನಸೂರು ರಾಜಿನಾಮೆಗೆ ಮುಖ್ಯಮಂತ್ರಿ ಕಾರಣ ?
ಬೆಂಗಳೂರು ಮಾ.23: ಮಾಜಿ ಸಚಿವ, ಹಿರಿಯ ರಾಜಕಾರಣಿ ಬಾಬುರಾವ್ ಚಿಂಚನಸೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಾರಣ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರವೊಂದರ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವೇದಿಕೆ ಮೇಲೆ ಗದರಿದ್ದು ಬಾಬುರಾವ್ ಚಿಂಚನಸೂರು ಪಕ್ಷ ಬಿಡಲು ಕಾರಣ ಎನ್ನಲಾಗುತ್ತಿದೆ.
ಜನವರಿ 24ರಂದು ದೇವಲ ಗಾಣಗಾಪುರದಲ್ಲಿ ನಡೆದಿದ್ದ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಭಾಷಣ ಮಾಡ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ್ದ ಬಾಬುರಾವ್ ಚಿಂಚನಸೂರು ಕೋಲಿ, ಕಬ್ಬಲಿಗ ಸಮಾಜಕ್ಕೆ ಎಸ್ಟಿ ಮೀಸಲಾತಿ ಕೊಡಬೇಕು ಅಂತಾ ಮನವಿ ಮಾಡಿದ್ದರು. ಈ ವೇಳೆ ಗರಂ ಆಗಿದ್ದ ಸಿಎಂ ಬೊಮ್ಮಾಯಿ, ನಾನು ಸಿಎಂ ಇದ್ದೇನೆ, ನನಗೆಲ್ಲಾ ಗೊತ್ತಿದೆ, ಸುಮ್ಮನೆ ಹೋಗಿ ಕೂತ್ಕಳಪ್ಪ ಅಂತಾ ತುಂಬಿದ ಸಭೆಯಲ್ಲೇ ಗದರಿದ್ದರು. ಇದೇ ಕಾರಣಕ್ಕೆ ಬೇಸರಗೊಂಡ ಹಿರಿಯ ರಾಜಕಾರಣಿ ಚಿಂಚನಸೂರು ಬಿಜೆಪಿ ಹಾಗೂ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆನ್ನಲಾಗಿದೆ.
ಸದ್ಯ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆಯಾದರೂ ಬಾಬುರಾವ್ ಚಿಂಚನಸೂರು ಅವರು ಪಕ್ಷ ಬಿಟ್ಟು ಮತ್ತೆ ಕಾಂಗ್ರೆಸ್ ಸೇರಲು ಅಸಲಿ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅಥವಾ ಸ್ವತಃ ಬಾಬುರಾವ್ ಚಿಂಚನಸೂರು ಅವರೇ ತಿಳಿಸಿ ಈ ಊಹಾ ಪೋಹಗಳಿಗೆ ತೆರೆ ಎಳೆಯಬೇಕಿದೆ.