ಅಡುಗೆ ಅನಿಲ್ ರೀಫಿಲ್ಲಿಂಗ್ ದಂಧೆ: ಗೋ ಗ್ಯಾಸ್ ಮಾಲೀಕ ಸಹಿತ ಐವರ ಬಂಧನ
ಬೆಂಗಳೂರು ಮಾ.22 : ಅಡುಗೆ ಅನಿಲ ರಿಫಿಲ್ಲಿಂಗ್ ದಂಧೆ ಆರೋಪದ ಮೇಲೆ ಗೋ ಗ್ಯಾಸ್ ಏಜೆನ್ಸಿ ಮಾಲೀಕ ಸೇರಿ ಐವರನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
‘ಬಿಟಿಎಂ ಎರಡನೇ ಹಂತದ ನಿವಾಸಿ ಎಂ.ಸುಮಂತ್ (32), ದೀಪಕ್ (30), ರಾಜು (21), ಪ್ರಕಾಶ್ (21) ಹಾಗೂ ರಿತಿಕ್ (19) ಬಂಧಿತ ಆರೋಪಿಗಳು. ಬಂಧಿತರಿಂದ 35 ಲಕ್ಷ ರೂ. ಮೌಲ್ಯದ 694 ಸಿಲಿಂಡರ್ ಹಾಗೂ 75 ರಿಫಿಲ್ಲಿಂಗ್ ರಾಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿ ಜಂಟಿ ಕಮಿಷನರ್ ಎಸ್.ಡಿ. ಶರಣಪ್ಪ ಅವರು, ಅಕ್ರಮ ರಿಫಿಲ್ಡಿಂಗ್ ದಂಧೆ ವಿರುದ್ಧ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗೋಗ್ಯಾಸ್ ಏಜೆನ್ಸಿ ಹೊಂದಿದ್ದ ಸುಮಂತ್, ವಾಣಿಜ್ಯ ಹಾಗೂ ಗೃಹೋಪಯೋಗಿ ಸಿಲಿಂಡರ್ಗಳನ್ನು ರಿಫಿಲ್ಡಿಂಗ್ ಮಾಡುತ್ತಿದ್ದ. ಇಂಡೇನ್, ಭಾರತ್ ಹಾಗೂ ಎಚ್.ಪಿ ಕಂಪನಿಯ ದೊಡ್ಡ ಸಿಲಿಂಡರ್ಗಳನ್ನು ಬಳಸಿಕೊಂಡು ಚಿಕ್ಕ ಸಿಲಿಂಡರ್ಗಳಿಗೆ ಅನಿಲ ತುಂಬುತ್ತಿದ್ದ. ಇದಕ್ಕೆಂದು ಕೆಲಸಗಾರರನ್ನು ನಿಯೋಜಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಹಾಗೂ ಕೃತ್ಯದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಬಿಟಿಎಂ 2ನೇ ಹಂತದಲ್ಲಿರುವ ಶೆಡ್ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ’. ರಿಫಿಲ್ಡಿಂಗ್ ದಂಧೆಯಿಂದಲೇ ಆರೋಪಿ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದ. ಇಂಡೇನ್, ಭಾರತ್ ಹಾಗೂ ಎಚ್.ಪಿ ಕಂಪನಿಯ 75 ಸಿಲಿಂಡರ್ಗಳು ಶಡ್ನಲ್ಲಿ ಸಿಕ್ಕಿವೆ. ಉಳಿದಂತೆ, ಗೋಗ್ಯಾಸ್ ಸಿಲಿಂಡರ್ಗಳನ್ನೂ ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.