ಬೆಂಗಳೂರು: 6 ತಿಂಗಳಲ್ಲಿ 113 ಮೊಬೈಲ್ ಕದ್ದ ಕಳ್ಳರ ಬಂಧನ
ಬೆಂಗಳೂರು ಮಾ.22 : ವಿವಿಧೆಡೆ ನಡೆದ ದ್ವಿಚಕ್ರ ವಾಹನ ಕಳ್ಳತನ ಹಾಗೂ ಮೊಬೈಲ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಪಾದರಾಯನಪುರ ಗೋರಿಪಾಳ್ಯದ ಸುಹೇಲ್ (20), ಸಾಕಿಬ್ (19) ಹಾಗೂ ಮೊಹಮ್ಮದ್ ಸಕ್ಲೇನ್ (23) ಬಂಧಿತ ಆರೋಪಿಗಳು.
ಕೋರಮಂಗಲದ ಎಸ್.ಟಿ. ಬೆಡ್ ಬಡಾವಣೆ ನಿವಾಸಿಯೊಬ್ಬರ ಮೊಬೈಲ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದು, ಬಂಧಿತರಿಂದ 40.38 ಲಕ್ಷ ಮೌಲ್ಯದ ಎರಡು ದ್ವಿಚಕ್ರವಾಹನ ಹಾಗೂ 113 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳು ಅಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಪಲ್ಸರ್ ಬೈಕ್ ಕಳ್ಳತನ ಮಾಡಿ ಅದರಲ್ಲೇ ನಗರದ ಹಲವೆಡೆ ಸುತ್ತಾಡುತ್ತಿದ್ದರು. ರಸ್ತೆಯಲ್ಲಿ ಮಾತನಾಡಿಕೊಂಡು ಹೋಗುವ ಜನರನ್ನು ಹಿಂಬಾಲಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಕೆಲವೆಡೆ ಜನರನ್ನು ಬೆದರಿಸಿ ಮೊಬೈಲ್ ಸುಲಿಗೆ ಮಾಡಿದ್ದರು’ ಎಂದು ತಿಳಿಸಿದರು.
ಹಾಗೂ ಈ ಆರೋಪಿಗಳು ‘ಆರು ತಿಂಗಳ ಅವಧಿಯಲ್ಲಿ 113 ಮೊಬೈಲ್ಗಳನ್ನು ಸುಲಿಗೆ ಮಾಡಿದ್ದರು. ವಿವೇಕನಗರ, ಕಬ್ಬನ್ ಪಾರ್ಕ್, ಅಡುಗೋಡಿ, ಅಶೋಕನಗರ, ವಿಲ್ಸನ್ ಗಾರ್ಡನ್ ಹಾಗೂ ಎಚ್ಎಸ್ಎಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೆ ಜಪ್ತಿ ಮಾಡಿದ ಮೊಬೈಲ್ಗಳಲ್ಲಿ ಐ-ಪೋನ್ಗಳು ಹೆಚ್ಚಿವೆ’ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಆರೋಪಿಗಳು ಕದ್ದ ಮೊಬೈಲ್ಗಳನ್ನು ಮಾರಿ ಬಂದ ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು. ಇದರೊಂದಿಗೆ ಆರೋಪಿಗಳು ಮತ್ತಷ್ಟು ಕಡೆ ಮೊಬೈಲ್ ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದ್ದಾರೆ.