ಮತಾಂತರ ಆರೋಪ: ಕ್ರೈಸ್ತರ ಪಾರ್ಥನಾ ಸಭೆಗೆ ನುಗ್ಗಿ ಬಜರಂಗ ದಳದ ಕಾರ್ಯಕರ್ತರಿಂದ ದಾಂಧಲೆ
ಶಿವಮೊಗ್ಗ ಮಾ.20 :ಬಲವಂತದ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಬಜರಂಗ ದಳದ ಕಾರ್ಯಕರ್ತರು ಕ್ರೈಸ್ತರ ಪಾರ್ಥನಾ ಸಭೆಗೆ ನುಗ್ಗಿ ದಾಂಧಲೆವೆಬ್ಬಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೊಂದು ವೈರಲ್ ಆಗಿದ್ದು, ಪ್ರಾರ್ಥನೆಯಲ್ಲಿ ಪಾಲ್ಗೊಂಡ ಮಹಿಳೆಯರು ನಾವು ಸ್ವ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ, ನಾವು ಮತಾಂತರ ಆಗಿಲ್ಲ ಎಂದು ಬಜರಂಗದಳದ ಕಾರ್ಯಕರ್ತರೊಂದಿಗೆ ಹೇಳುತ್ತಿರುವುದು ನೋಡಬಹುದಾಗಿದೆ.
ಶಿವಮೊಗ್ಗದ ಗೋಪಶೆಟ್ಟಿ ರಸ್ತೆಯ ಮನೆಯೊಂದರಲ್ಲಿ ಕಳೆದ 15 ವರ್ಷಗಳಿಂದ ಪ್ರಾರ್ಥನಾ ಸಭೆ ನಡೆಯುತ್ತಿದೆ. ಸ್ಥಳೀಯ ಮಹಿಳೆಯರು, ಪುರುಷರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ನಿನ್ನೆ ಕೂಡ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ಪ್ರಾರ್ಥನೆ ನಡೆಯುತ್ತಿದ್ದಂತೆ ಏಕಾಏಕಿ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಘೋಷಣೆ ಕೂಗಿ ಪ್ರಾರ್ಥನೆ ಅಡ್ಡಿಪಡಿಸಿದ್ದಲ್ಲದೆ ಅಲ್ಲಿದ್ದ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಪಾದ್ರಿ ಮಣಿಕಂಠ ಇಮ್ಯಾನ್ಯುಯೆಲ್ ಅವರು, ಇಲ್ಲಿ ಯಾವುದೇ ರೀತಿಯ ಮತಾಂತರ ನಡೆಯುತ್ತಿಲ್ಲ. ಕಳೆದ 15 ವರ್ಷಗಳಿಂದ ಇಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಸ್ವ ಇಚ್ಛೆಯಿಂದ ಸ್ಥಳೀಯರು ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪ್ರಾರ್ಥನೆಯಿಂದ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇರುವವರು ಇಲ್ಲಿಗೆ ಬರುತ್ತಾರೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಪೊಲೀಸರು ಪಾದ್ರಿ ಮಣಿಕಂಠ ಹಾಗೂ ಇತರ ಕೆಲವು ಮಹಿಳೆಯರನ್ನು ಠಾಣೆಗೆ ಕರೆದೊಯ್ದು ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಬಜರಂಗ ದಳದ ಗೂಂಡಾ ಪ್ರವೃತ್ತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರ ನಡೆಯನ್ನು ಕೂಡ ಸಾರ್ವಜನಿಕರು ಖಂಡಿಸಿದ್ದಾರೆ.