ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಕಾಂಗ್ರೆಸ್

ಬೆಂಗಳೂರು ಮಾ.18 : ಕಾಂಗ್ರೆಸ್ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೋಹನ್ ಪ್ರಕಾಶ್ ನೇತೃತ್ವದ ಸ್ಕ್ರೀನಿಂಗ್ ಕಮಿಟಿಯು ಪ್ರಸ್ತಾಪಿಸಿದ ಬಹುತೇಕ ಎಲ್ಲಾ 71 ಹಾಲಿ ಶಾಸಕರು ಮತ್ತು ಏಕೈಕ ಹೆಸರುಗಳನ್ನು ಫೈನಲ್ ಮಾಡಲಾಗಿದ್ದು, 2018 ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತವರಿಗೆ ಮತ್ತೆ ಮಣೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಈ ಬಾರಿ ತಂದೆ-ಮಕ್ಕಳ ಕಾಂಬಿನೇಷನ್ ಸ್ಪರ್ಧೆ ನಡೆಯಲಿದ್ದು, ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಾಧ್ಯವಾದರೇ ಸೋಮವಾರ ಅಥವಾ ಯುಗಾದಿ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿಗೆ ಭೇಟಿ ನೀಡಿದ ನಂತರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ನಡೆದ ಸಭೆಯ ನಂತರ ಮತ್ತೊಂದು ಸುತ್ತಿನ ಚರ್ಚೆಗಾಗಿ ನಾಯಕರು ಖರ್ಗೆ ಅವರ ಅಧಿಕೃತ ನಿವಾಸಕ್ಕೆ ತೆರಳಿದರು. ಅಲ್ಲದೆ ಕೊನೆಯ ಗಳಿಗೆಯಲ್ಲಿ ಪಕ್ಷಕ್ಕೆ ಸೇರಲು ಸಿದ್ಧರಾಗಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರಕ್ಕೆ ಇತ್ತೀಚೆಗೆ ನಿಧನರಾದ ಲೋಕಸಭೆಯ ಮಾಜಿ ಸದಸ್ಯ ಧ್ರುವನಾರಾಯಣ್ ಅವರ ಪುತ್ರ ದರ್ಶನ್, ಮುಳಬಾಗಲು ಶಾಸಕ ನಾಗೇಶ್ ಮತ್ತು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಕೆಲವು ಅಭ್ಯರ್ಥಿಗಳ ಹೆಸರನ್ನು ಸಿಇಸಿ ತೆರವುಗೊಳಿಸಿದೆ.

ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಪುತ್ರಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್, ಸಿ.ಎಲ್.ಪಿ.ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ, ವರುಣಾ ಶಾಸಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಜವ್ಹರ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊರಟಗೆರೆಯಲ್ಲಿ ಗೆಲುವು ಕಷ್ಟ ಎಂದು ಭಾವಿಸಿದರೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಸಿ.ವಿ.ರಾಮನ್ ನಗರ ಕ್ಷೇತ್ರವನ್ನು, ಎಚ್.ಸಿ.ಮಹದೇವಪ್ಪ ಅವರಿಗೆ ಬೆಂಗಳೂರಿನ ಮಹದೇವಪುರ ಅಥವಾ ಪುಲಿಕೇಶಿನಗರ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೆಂಗಳೂರಿನಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಪಕ್ಷದ ತಂತ್ರದ ಭಾಗವಾಗಿದೆ. ಮುನಿಯಪ್ಪ ಅವರಿಗೆ ದೇವನಹಳ್ಳಿ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಚಿಂತಾಮಣಿಗೆ ಡಾ.ಎಂ.ಸಿ.ಸುಧಾಕರ್, ಬಾಗೇಪಲ್ಲಿಗೆ ಸುಬ್ಬಾರೆಡ್ಡಿ, ಗೌರಿಬಿದನೂರಿಗೆ ಶಿವಶಂಕರರೆಡ್ಡಿ, ಶ್ರೀನಿವಾಸಪುರದಿಂದ ರಮೇಶ್ ಕುಮಾರ್, ಬಂಗಾರಪೇಟೆಯಿಂದ ಎಸ್.ನಾರಾಯಣಸ್ವಾಮಿ ಅವರನ್ನೂ ತೆರವುಗೊಳಿಸಲಾಗಿದೆ. ಅಖಂಡ ಶ್ರೀನಿವಾಸಮೂರ್ತಿ ಅವರು ಪ್ರತಿನಿಧಿಸುವ ಪುಲಿಕೇಶಿನಗರ ಸ್ಥಾನವನ್ನು ಅಲ್ಪಸಂಖ್ಯಾತರು ವಿರೋಧಿಸಿದ್ದರಿಂದ ಘೋಷಣೆ ಮಾಡಲಾಗಿಲ್ಲ. ಅಲ್ಲದೆ ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ಗೊಲ್ಲ ಸಮುದಾಯದವರಾದ ಮಾಜಿ ಸಚಿವ ದಿವಂಗತ ಎ ಕೃಷ್ಣಪ್ಪ ಅವರ ಪುತ್ರಿ ಹಿರಿಯೂರಿನ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!