ಪೆರ್ಡೂರು ರಥೋತ್ಸವ ಸಂಪನ್ನ

ಹೆಬ್ರಿ, ಮಾ.18: ಪೆರ್ಡೂರು ಕದಳೀಪ್ರಿಯ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮ ಹಾರಥೋತ್ಸವ ನಿನ್ನೆ ಸಂಪನ್ನಗೊಂಡಿದೆ.

ರಥೋತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕೆ.ಜಿ. ವಿಟ್ಠಲ ತಂತ್ರಿಗಳ ನೇತೃತ್ವದಲ್ಲಿ ನಡೆದಿದ್ದು, ಬೆಳಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ರಥಹೋಮ, ರಥ ಸಂಪ್ರೋಕ್ಷಣೆ, ಕೊಡಿಪೂಜೆ, ಮಹಾ ಪೂಜೆ. ಪೂರ್ವಾಹ್ನ ರಥಾರೋಹಣ ನಡೆಯಿತು. ಬಳಿಕ ಸಂಜೆ ಶ್ರೀ ದೇವರ ಶ್ರೀಮನ್ಮಹಾರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ನಂತರ ರಾತ್ರಿ ನರ್ತನ, ವಾದ್ಯ ಸೇವಾದಿಗಳು, ಹಚ್ಚಡ ಸೇವೆ, ರಥಾವರೋಹಣ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಓಲಗಮಂಟಪ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ಶ್ರೀ ಭೂತಬಲಿ, ಕವಾಟಬಂಧನ, ಶಯನ ಮೊದಲಾದ ಧಾರ್ಮಿಕ ಹಾಗೂ ಕಾರ್ಯಕ್ರಮಗಳು ನಡೆದವು. ಹಾಗೂ ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಹೇಶ್ ಶೆಟ್ಟಿ ಪೈ ಬೆಟ್ಟು, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಸಮಿತಿಯ ಸದಸ್ಯರಾದ ಜಯಾನಂದ ಹೆಗ್ಡೆ, ಜಯಪೂಜಾರಿ, ಡಾ.ವಿದ್ಯಾಧರ ಶೆಟ್ಟಿ, ಕೆ. ದಿವಾಕರ ಶೆಟ್ಟಿ, ಶಂಕರ ನಾಯ್ಕ್, ನಾಗಲಕ್ಷ್ಮೀ ನಾಯಕ್, ವನಿತಾ ಕುಲಾಲ್ ಉಪಸ್ಥಿತರಿದ್ದರು.

ರಥೋತ್ಸವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹಿರಿಯಡ್ಕ ಪೊಲೀಸರಿಂದ ವಿಶೇಷ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಗೂ ರಥ ಮೆರವಣಿಗೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಡಕಾಗದಂತೆ ಬದಲಿ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!