ಉದ್ಯಾವರ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ- ಕಡಿವಾಣಕ್ಕೆ ಅದಮಾರು ಶ್ರೀ ಆಗ್ರಹ

ಉಡುಪಿ ಮಾ.18(ಉಡುಪಿ ಟೈಮ್ಸ್ ವರದಿ): ಉದ್ಯಾವರ ಪಾಪನಾಸಿನಿ ಹೊಳೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಮಾಫಿಯಕ್ಕೆ ಕಡಿವಾಣ ಹಾಕಬೇಕು ಎಂದು  ಅದಮಾರು ಈಶಪ್ರಿಯ ಸ್ವಾಮಿಜಿ ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯಿಂದ ಮಂಗಳೂರಿನ ಕಡೆ ಹೋಗುವಾಗ ಉದ್ಯಾವರ ಸೇತುವೆಯ ಎಡಭಾಗದ ಪಾಪನಾಶಿನಿ ಹೊಳೆಯಲ್ಲಿ ಇತ್ತೀಚಿನ ಕೆಲವು ಸಮಯದಿಂದ ಅಕ್ರಮ ಮರಳುಗಾರಿಕೆ ಮಾಫಿಯಾ ಕಾಲಿಟ್ಟಿದೆ. ನದಿಯ ಸುಮಾರು 5 ಕ್ಕೂ ಹೆಚ್ಚು ಕಡೆಗಳಲ್ಲಿ ಮರಳು ತೆಗೆಯುವ ಅಕ್ರಮ ದಕ್ಕೆಗಳಿದ್ದು, ದಿನಕ್ಕೆ ಕನಿಷ್ಠ 150 ಯೂನಿಟ್ ಮರಳು ಪಾಪನಾಶಿನಿಯ ಒಡಲಿನಿಂದ ಖಾಲಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಅಕ್ರಮ ಮರಳು ಮಾಫಿಯಾದಿಂದಾಗಿ ಆಗುತ್ತಿರುವ ಮತ್ತು ಆಗಬಹುದಾದ ಅನಾಹುತಗಳು ಬಹಳಷ್ಟಿದೆ. ಈ ಅಕ್ರಮ ಮರಳುಗಾರಿಕೆಯಿಂದ ಉದ್ಯಾವರ ಕುದ್ರು ಊರಿನ ಸುತ್ತಮುತ್ತಲಿರುವ ಅನೇಕರ ಜಾಗಗಳು ನೀರು ಪಾಲಾಗುತ್ತಿದೆ. ದಿನದ 24 ಗಂಟೆಯೂ ಮರಳು ಸಾಗಿಸುವ ವಾಹನಗಳ ನಿರಂತರ ಓಡಾಟದಿಂದ ಅಪರಿಮಿತ ಶಬ್ದ ಮಾಲಿನ್ಯ ಪರಿಸರ ಮಾಲಿನ್ಯದಿಂದ ಸಂಪೂರ್ಣ ಊರಿನ ಮಂದಿ ಕಂಗೆಟ್ಟಿದ್ದಾರೆ. ನಿದ್ರೆಯಿಲ್ಲದೆ ರಾತ್ರಿಗಳನ್ನು ಕಳೆಯುತ್ತಿದ್ದಾರೆ, ಹಸಿರಿನಿಂದ ಕಂಗೊಳಿಸುತ್ತಿದ್ದ ಊರು ಧೂಳಿನಿಂದ ಮುಚ್ಚಿಹೋಗಿದೆ ಎಂದು ಹೇಳಿದ್ದಾರೆ.

ಮರಳು ತೆಗೆಯುವ ಕಾರ್ಮಿಕರ ಅವ್ಯಾಚ್ಯ ಬೈಗುಳ, ಮಾದಕ ದ್ರವ್ಯ ಸೇವನೆ, ಅನಾಗರಿಕ ವರ್ತನೆಯಿಂದ ಊರಿನ ಜನ ಕಂಗಾಲಾಗಿದ್ದಾರೆ. ಇನ್ನೂ ಕೆಲವು ತಿಂಗಳು ಈ ಮರಳಿನ ದಂಧೆ ಹೀಗೆಯೇ ಮುಂದುವರಿದರೆ ನದಿಯ ಮೇಲೆ ನಿರ್ಮಿಸಿರುವ ರೈಲ್ವೆ ಬ್ರಿಡ್ಜ್ ಕುಸಿದು ಬೀಳುವುದು ಶತಃಸಿದ್ಧ. ಈಗಾಗಲೇ ಉದ್ಯಾವರ ಕುದ್ರು ಪರಿಸರದ ಬಹತೇಕ ಪ್ರದೇಶ ನದಿ ಪಾಲಾಗುತ್ತಿದ್ದು, ದಿನದಿಂದ ದಿನಕ್ಕೆ ಊರಿನ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ‘ಉದ್ಯಾವರ ಕುದ್ರು’ ಎಂಬ ಸುಂದರ ಊರು ಭೌಗೋಳಿಕವಾಗಿಯೇ ಇಲ್ಲವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಈ ಬಗ್ಗೆ ಕ್ರಮ ಜರುಗಿಸಿ ಉದ್ಯಾವರ ಕುದ್ರು ಬೊಳ್ಜೆಯ ಸುತ್ತಮುತ್ತ ನಡೆಯುತ್ತಿರುವ ಈ ಮರಳು ಮಾಫಿಯಾಕ್ಕೆ ಕಡಿವಾಣ ಹಾಕದಿದ್ದಲ್ಲಿ ಊರಿನ ನಾಗರಿಕರು, ಸಂಘ-ಸಂಸ್ಥೆಗಳು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!