ಪ್ರಿಯತಮೆಯ ಮದುವೆ ಮಂಟಪಕ್ಕೆನುಗ್ಗಿ ಕತ್ತುಕೊಯ್ದುಕೊಂಡ ಯುವಕ
ಚಿಕ್ಕಬಳ್ಳಾಪುರ ಮಾ.18 : ಪ್ರಿಯಕರನೋರ್ವ ಪ್ರಿಯತಮೆಯ ಮದುವೆಯ ಕಲ್ಯಾಣ ಮಂಟಪಕ್ಕೆ ನುಗ್ಗಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಯುವಕನನ್ನು ಬೆಂಗಳೂರಿನ ಗೋರಿಪಾಳ್ಯದ ನಿವಾಸಿ ನಿತೇಶ್ ಎಂದು ಗುರುತಿಸಲಾಗಿದೆ. ಈತ ಚಿಕ್ಕದಿನಿಂದಲೂ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈ ವಿಚಾರಕ್ಕೆ ಯುವತಿಯ ಮನೆಯ ಬಳಿ ಹಲವು ಬಾರಿ ಬಂದು ಆತ ಗಲಾಟೆಯೂ ಮಾಡಿದ್ದ. ಮಾತ್ರವಲ್ಲದೆ ಯುವತಿಯ ಮದುವೆ ವಿಚಾರ ತಿಳಿದು ಖಾಸಗಿ ಕಲ್ಯಾಣ ಮಂಟಪಕ್ಕೆ ತೆರಳಿ ಅಲ್ಲಿ ಕೂಡಾ ಕೂಗಾಡಿ ಗಲಾಟೆ ಮಾಡಿದ್ದಾನೆ.ಈ ವೇಳೆ ವಧುವಿನ ಕಡೆಯವರು ಆತನಿಗೆ ಥಳಿಸಿದ್ದಾರೆ. ಇದೇ ವಿಚಾರಕ್ಕೆ ಯುವಕ ಮತ್ತು ಯುವತಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದ್ದು, ಕಲ್ಯಾಣ ಮಂಟಪದಲ್ಲೇ ಯುವಕ ಎಲ್ಲರ ಎದುರು ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಹೇಳಿದ್ದಾರೆ. ಯುವಕನ ಗಲಾಟೆಯಿಂದ ಬೆಚ್ಚಿಬಿದ್ದ ವರನ ಕಡೆಯವರು ಮದುವೆಯನ್ನ ರದ್ದುಗೊಳಿಸಿಕೊಂಡು ವಾಪಸ್ ಹೋಗಿದ್ದಾರೆ ಎಂದು ತಿಳಿದು ಬಂದಿದೆ.