ಕಾರ್ಕಳ: ದಲಿತ ಪುರಸಭಾ ಸದಸ್ಯೆಗೆ ದೇವಸ್ಥಾನದಲ್ಲಿ ಊಟ ಬಡಿಸದಂತೆ ಜಾತಿ ನಿಂದನೆ ಆರೋಪ-ದೂರು ದಾಖಲು

ಕಾರ್ಕಳ, ಮಾ.17: ಪರಿಶಿಷ್ಟ ಜಾತಿಗೆ ಸೇರಿದ ಕಾರ್ಕಳ ಪುರಸಭಾ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ ಅವರಿಗೆ ದೇವಸ್ಥಾನದಲ್ಲಿ ಊಟ ಬಡಿಸದಂತೆ ಮತ್ತು ಒಳಗೆ ಬಾರದಂತೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಪ್ರತಿಮಾ ರಾಣೆ ಅವರು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರಂತೆ ಇವರು ಕಾರ್ಕಳ ಮಾರಿಗುಡಿಯ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರು. ಮಾ.12ರಂದು ಬೆಳಗ್ಗೆ ದೇವಸ್ಥಾನದ ಊಟದ ವಿಚಾರವಾಗಿ ವಾಟ್ಸಾಪ್‌ನಲ್ಲಿ ಬಂದ ಸಂದೇಶದ ಬಗ್ಗೆ ಕಾರ್ಕಳ ಎಸ್‌ವಿಟಿ ಸರ್ಕಲ್ ನಿವಾಸಿ ರಮಿತಾ ಶೈಲೇಂದ್ರ, ಪ್ರತಿಮಾ ರಾಣೆ ಅವರನ್ನುದ್ದೇಶಿಸಿ ಪುರಸಭಾ ಕಟ್ಟಡದ ಬಳಿ ಸಾರ್ವಜನಿಕವಾಗಿ ಎಸ್‌ಸಿ ಎಸ್‌ಟಿಯವರಿಗೆ ಊಟ ಬಡಿಸಲು ಬಿಡಬೇಡಿ, ಅವರನ್ನು ಒಳ ಬಿಟ್ಟಲ್ಲಿ ಮೈಲಿಗೆ ಆಗುತ್ತದೆ ಎಂದು ಹೇಳಿ ನಿಂದಿಸಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಹಾಗೂ ಇದೇ ವಿಚಾರ ವಾಟ್ಸಾಪ್ ಮೂಲಕ ಬಂದಿರುವ ಬಗ್ಗೆ ಆರೋಪಿಯು ಪ್ರತಿಮಾ ಅವರಲ್ಲಿ ಈ ವಾಟ್ಸಾಪ್ ಸಂದೇಶವನ್ನು ನೀವೇ ಕಳುಹಿಸಿ ಕೊಟ್ಟಿರುತ್ತೀರಾ ಎಂದು ಹೇಳಿ ಮಾ.14ರಂದು ಮಧ್ಯಾಹ್ನ 1.45ಕ್ಕೆ ಪುರಸಭಾ ರಸ್ತೆಯಲ್ಲಿ ಪ್ರತಿಮಾ ಅವರನ್ನು ಅಡ್ಡಕಟ್ಟಿ ಗಲಾಟೆ ಮಾಡಿದ್ದು, ನೀನು ಎಸ್‌ಸಿ ದೇವಸ್ಥಾನದ ಒಳಗೆ ಬರಬಾರದು ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!