PMO ಕಚೇರಿ ಅಧಿಕಾರಿ ಎಂದು ಹೇಳಿ Z+ ಭದ್ರತೆಯೊಂದಿಗೆ ಶ್ರೀನಗರ ಗಡಿ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ವಂಚಕ
ಶ್ರೀನಗರ ಮಾ.17 : ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿ ಎಂದು ಹೇಳಿಕೊಂಡು ವಂಚಕನೋರ್ವ ಝಡ್ ಪ್ಲಸ್ ಭದ್ರತೆಯೊಂದಿಗೆ ಗಡಿ ತಪಾಸಣಾ ಕೇಂದ್ರಕ್ಕೆ ಭೇಟಿನೀಡಿ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗುಜರಾತ್ ಮೂಲದ ವಂಚಕನೊಬ್ಬ ಈ ರೀತಿ ಝೆಡ್ ಪ್ಲಸ್ ಭದ್ರತೆ, ಗುಂಡುನಿರೋಧಕ ಮಹೀಂದ್ರಾ ಸ್ಕಾರ್ಪಿಯೋ, ಪಂಚತಾರಾ ಹೋಟೆಲ್ ವಾಸ್ತವ್ಯ ಸೇರಿದಂತೆ ಇದಕ್ಕಿಂತ ಹೆಚ್ಚು ಸೌಲಭ್ಯ ಪಡೆದು ಜಮ್ಮು ಮತ್ತು ಕಾಶ್ಮೀರದ ಆಡಳಿತವನ್ನು ಬೇಸ್ತು ಬೀಳಿಸಿವಂತೆ ಮಾಡಿದ್ದಾನೆ. ಈ ವಂಚಕನನ್ನು ಗುಜರಾತ್ ಮೂಲದ ಕಿರಣ್ ಭಾಯಿ ಪಟೇಲ್ ಎಂದು ಗುರುತಿಸಲಾಗಿದೆ. ಈತನು ಈ ವರ್ಷದ ಆರಂಭದಲ್ಲಿ ಎರಡು ಬಾರಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದ ಎಂದೂ ಹೇಳಲಾಗಿದೆ. ಅಲ್ಲದೆ ವಂಚಕ ಫೆಬ್ರವರಿ ತಿಂಗಳಲ್ಲಿ ಮೊದಲ ಬಾರಿಗೆ ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಆರೋಗ್ಯ ರೆಸಾರ್ಟ್ ಒಂದಕ್ಕೆ ತೆರಳಿದ್ದ ಎಂದು ಹೇಳಲಾಗಿದೆ.
ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ವ್ಯೂಹ ಮತ್ತು ಕಾರ್ಯತಂತ್ರ ವಿಭಾಗದ ಹೆಚ್ಚುವರಿ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ವಂಚಿಸಿದ್ದ ಈತನನ್ನು 10 ದಿನಗಳ ಹಿಂದೆಯೇ ಬಂಧಿಸಿದ್ದರು. ಆದರೆ ಈ ಸಂಗತಿಯನ್ನು ಪೊಲೀಸರು ಗೋಪ್ಯವಾಗಿಟ್ಟಿದ್ದರು. ಆರೋಪಿಯನ್ನು ನಿನ್ನೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಾಗಲೇ ಈ ಸಂಗತಿ ಬೆಳಕಿಗೆ ಬಂದಿದೆ. ಸದ್ಯ ಸೋಗಿನ ವ್ಯಕ್ತಿಯನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚುವಲ್ಲಿ ಕರ್ತವ್ಯ ಲೋಪ ಎಸಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ತನಿಖೆಯಲ್ಲಿ ಗುಜರಾತ್ ಪೊಲೀಸರೂ ಭಾಗಿಯಾಗಿದ್ದಾರೆ ಎಂದು ಹೇಳಿವೆ. ಆತನನ್ನು ಬಂಧಿಸಿದ ದಿನವೇ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆಯೊ ಅಥವಾ ಕೆಲ ದಿನಗಳ ವಿಳಂಬದ ನಂತರ ದಾಖಲಿಸಿಕೊಳ್ಳಲಾಗಿದೆಯೊ ಎಂಬ ಸಂಗತಿ ಇನ್ನೂ ಅಸ್ಪಷ್ಟವಾಗಿದೆ.
ಟ್ವಿಟರ್ ನಲ್ಲಿ ಕಿರಣ್ ಭಾಯಿ ಪಟೇಲ್ ದೃಢೀಕರಣಗೊಂಡಿರುವ ಖಾತೆದಾರನಾಗಿದ್ದು, ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿನ್ಹಾ ವಘೇಲಾ ಸೇರಿದಂತೆ ಸಾವಿರಾರು ಮಂದಿ ಆತನನ್ನು ಹಿಂಬಾಲಿಸುತ್ತಿದ್ದಾರೆ. ಆತ ತಾನು ಕಾಶ್ಮೀರಕ್ಕೆ ನೀಡಿದ್ದ ಅಧಿಕೃತ ಭೇಟಿಯ ಬಗ್ಗೆ ಹಲವಾರು ಭಾವಚಿತ್ರಗಳನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದ. ಈ ಪೈಕಿ ಆತ ಕೊನೆಯ ಭಾವಚಿತ್ರವನ್ನು ಮಾರ್ಚ್ 2ರಂದು ಹಂಚಿಕೊಂಡಿದ್ದ. ಆ ಭಾವಚಿತ್ರಗಳಲ್ಲಿ ಆತನ ಸುತ್ತ ಅರೆ ಸೇನಾಪಡೆಯ ಸೈನಿಕರು ಸುತ್ತುವರಿದಿರುವುದನ್ನು ಕಾಣಬಹುದಾಗಿದೆ.
ಆತನ ಟ್ವಿಟರ್ ವ್ಯಕ್ತಿ ವಿವರದ ಪ್ರಕಾರ, ಆತ ವರ್ಜಿನಿಯಾದ ಕಾಮನ್‍ವೆಲ್ತ್ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ, ತಿರುಚ್ಚಿಯ ಐಐಎಂನಲ್ಲಿ ಎಂಬಿಎ, ಕಂಪ್ಯೂಟರ್ ಸೈನ್ಸ್‍ನಲ್ಲಿ ಎಂಟೆಕ್ ಹಾಗೂ ಬಿಇ ಪದವಿ ಪಡೆದಿದ್ದೇನೆ ಎಂದು ಪ್ರತಿಪಾದಿಸಿದ್ದಾನೆ. ಅಲ್ಲದೆ ತನ್ನನ್ನು ತಾನು “ಚಿಂತಕ, ವ್ಯೂಹ ತಜ್ಞ, ವಿಶ್ಲೇಷಕ ಹಾಗೂ ಕಾರ್ಯತಂತ್ರ ವ್ಯವಸ್ಥಾಪಕ” ಎಂದೂ ಬಿಂಬಿಸಿಕೊಂಡಿದ್ದಾನೆ.
ಗುಪ್ತಚರ ಸಂಸ್ಥೆಗಳು ವಂಚಕನೊಬ್ಬ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿ ಎಂದು ಸೋಗು ಹಾಕುತ್ತಿದ್ದಾನೆ ಎಂದು ಪೊಲೀಸರಿಗೆ ಎಚ್ಚರಿಕೆ ರವಾನಿಸಿದ್ದವು. ಆತನ ಹಿನ್ನೆಲೆಯನ್ನು ಪರಿಶೀಲಿಸಿದ ನಂತರ ಆತನನ್ನು ಶ್ರೀನಗರದ ಹೋಟೆಲ್ ಒಂದರಿಂದ ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು.