ಮಂಗಳೂರು: ಪಟ್ಟು ಬಿಡದೆ ಸಿಎಂಗೆ ಅಹವಾಲು ಸಲ್ಲಿಸಿದ ಬೀದಿ ಬದಿ ವ್ಯಾಪಾರಿಗಳ ನಿಯೋಗ

ಮಂಗಳೂರು ಮಾ.17 : ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗೆ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ ಮತ್ತು ಕರ್ನಾಟಕ ಬೀದಿಬದಿ ವ್ಯಾಪಾರ ನಿಯಮದಂತೆ ಮಂಗಳೂರಿನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದೆ ದೌರ್ಜನ್ಯ ಎಸಗುತ್ತಿರುವ ಬಗ್ಗೆ  ಬೀದಿ ವ್ಯಾಪಾರಿಗಳ ಸಂಘದ ನಿಯೋಗವು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿತು. 

ಸಂಘದ ಗೌರವಾಧ್ಯಕ್ಷ ಬಿ.ಕೆ.ಇಯ್ತಿಯಾಝ್ ಮತ್ತು ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ನೇತ್ರತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಸ್ಥರು ಮುಖ್ಯ ಮಂತ್ರಿಗಳ ಕಾರ್ಯಕ್ರಮ ನಡೆಯುತ್ತಿದ್ದ ಕರಾವಳಿ ಮೈದಾನ ಸಮೀಪ ಜಮಾಯಿಸಿದರು. ಹಾಗೂ ಮುಖ್ಯ ಮಂತ್ರಿಗಳ ಭೇಟಿ ಮಾಡಲು ಅವಕಾಶ ನೀಡಲೇಬೇಕೆಂದು ಪಟ್ಟು ಹಿಡಿದರು. ಅಲ್ಲದೆ ಅವಕಾಶ ಸಿಗದೆ ಇದ್ದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು.

ಈ ವೇಳೆ ಪೊಲೀಸರು ಪ್ರತಿಭಟನೆ ನಡೆಸಿದರೆ ಬಂಧಿಸುವ ಎಚ್ಚರಿಕೆ ನೀಡಿದರು.ಆದರೆ ಪೋಲೀಸರ ಎಚ್ಚರಿಕೆಗೆ ಜಗ್ಗದ ಬೀದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗುವ ತೀರ್ಮಾನ ಮಾಡಿದಾಗ ಪೋಲಿಸರು 10 ಮಂದಿ ಬೀದಿ ವ್ಯಾಪಾರಿಗಳ ಪ್ರತಿನಿಧಿಗಳಿಗೆ ಮುಖ್ಯ ಮಂತ್ರಿಯನ್ನು ಭೇಟಿ ಮಾಡಲು ಅವಕಾಶ ನೀಡಿದರು.

ಮುಖ್ಯ ಮಂತ್ರಿಗಳು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಬೀದಿ ವ್ಯಾಪಾರಿಗಳು ಘೋಷಣೆ ಕೂಗಲು ಭಿತ್ತಿ ಪತ್ರ ಹಿಡಿಯಲು ಪ್ರಯತ್ನಿಸುತ್ತಿದ್ದಂತೆ ಮುಖ್ಯ ಮಂತ್ರಿ ನೇರವಾಗಿ ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿಗಳ ಬಳಿ ಬಂದು ಮನವಿ ಸ್ವೀಕರಿಸಿ ಜೊತೆಯಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಬೀದಿ ವ್ಯಾಪಾರಿಗಳ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಭೇಟಿ ಮಾಡಿದ ನಿಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಯ್ತಿಯಾಝ್, ಸಂಘದ ಸಂಸ್ಥಾಪಕ ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್, ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಖಂಡರಾದ ಆಸೀಫ್ ಬಾವ ಉರುಮನೆ, ಸಂತೋಷ್ ಆರ್ ಎಸ್, ಪ್ರವೀಣ್ ಕದ್ರಿ, ಅಬ್ದುಲ್ ರಹಿಮಾನ್ ಅಡ್ಯಾರ್, ಮೇಬಲ್ ಡಿಸೋಜ, ಸಿದ್ದಮ್ಮ, ಆದಂ ಬಜಾಲ್, ಎಂ.ಕೆ.ರಿಯಾಝ್, ಇಸ್ಮಾಯಿಲ್ ಉಳ್ಳಾಲ, ನೌಷದ್ ಉಳ್ಳಾಲ, ಮೇರಿ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!