ಸಾರಿಗೆ ಮುಷ್ಕರ’ದಿಂದ ಹಿಂದೆ ಸರಿಯುವುದಿಲ್ಲ: ಅನಂತ ಸುಬ್ಬರಾವ್
ಬೆಂಗಳೂರು ಮಾ.17 : ‘ಸಾರಿಗೆ ಮುಷ್ಕರ’ದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಮೂಲಕ ಮಾಹಿತಿ ನೀಡಿರುವ ಅವರು, ಸರಕಾರ ಏಕಪಕ್ಷೀಯವಾಗಿ ಮೂಲ ವೇತನದ ಶೇ.15ರಷ್ಟು ಹೆಚ್ಚಳವನ್ನು ಘೋಷಿಸಿರುವುದು ಮಾಧ್ಯಮಗಳಿಂದ ತಿಳಿದು ಬಂದಿದ್ದು, ಅಧಿಕೃತ ಆದೇಶವೇ ಬಂದಿಲ್ಲ. ಅಲ್ಲದೆ ನೌಕರರ ಭತ್ಯೆ, ವಜಾಗೊಂಡವರ ಮರುನೇಮಕ ಸೇರಿದಂತೆ ಹಲವು ಬೇಡಿಕೆಗಳು ಹಾಗೆಯೆ ಉಳಿದಿವೆ. ಆದ್ದರಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಹಿತ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಈ ತಿಂಗಳ 21ಕ್ಕೆ ಕರೆ ನೀಡಿರುವ ಸಾರಿಗೆ ಮುಷ್ಕರ’ದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’. ಸಾರಿಗೆ ನೌಕರರ ಸಂಘವು ಮಾ.21ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜನರಿಗೆ ತೊಂದರೆ ಮಾಡುವ ಉದ್ದೇಶವಿಲ್ಲ’ ಎಂದಿರುವ ಅವರು, ‘ವಜಾಗೊಂಡ ಸಾರಿಗೆ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ನೌಕರರಿಗೆ ಶೇ.25ರಷ್ಟು ವೇತನ ಹೆಚ್ಚಳ ಮಾಡುವುದು, ಇನ್ಸೆಟಿವ್, ಭತ್ತೆ ಹೆಚ್ಚು ಮಾಡುವುದು ಸಾರಿಗೆ ನೌಕರರ ಬೇಡಿಕೆಯಾಗಿದೆ. ನಾವು ಇವುಗಳ ಆದೇಶಕ್ಕೆ ಕಾಯುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದು ಮಾತನಾಡಿದರೆ ಸಮಸ್ಯೆ ಇತ್ಯರ್ಥ ಆಗುತ್ತದೆ. ಇಲ್ಲದಿದ್ದರೆ ಹೋರಾಟ ಮುಂದುವರಿಯುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮಾ.17 ರಂದು ಸಾರಿಗೆ ನೌಕರರ ಸಂಘದ ಸಮಾವೇಶ ನಡೆಯಲಿದೆ. ಮಾ.21ಕ್ಕೆ ಮುಷ್ಕರ ಆರಂಭಗೊಳ್ಳುತ್ತದೆ. ಮುಖ್ಯಮಂತ್ರಿ ನೇರವಾಗಿ ನಮ್ಮ ಜೊತೆ ಸಭೆ ಮಾಡದೆ ಈ ರೀತಿ ಆದೇಶ ಮಾಡಿದ್ದಾರೆ. ಕೇವಲ ಒಂದು ಬೇಡಿಕೆ ಈಡೇರಿಸುವ ಆದೇಶ ಬಂದರೆ ನಮ್ಮ ಹೋರಾಟ ನಡೆಯಲಿದೆ. ಈ ಹೋರಾಟಕ್ಕೆ ನಾಲ್ಕು ನಿಗಮಗಳ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ಮಾ.21ರಿಂದ 23 ಸಾವಿರ ಕೆಎಸ್ಸಾರ್ಟಿಸಿ ಬಸ್‍ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಚುನಾವಣೆ ಪ್ರಕ್ರಿಯೆ ಇರುವುದರಿಂದ ಮಾ.21ಕ್ಕೆ ಬಂದ್ ಕರೆ ನೀಡಿದ್ದೇವೆ. ಜನರಿಗೆ ತೊಂದರೆ ಮಾಡುವ ಉದ್ದೇಶವಿಲ್ಲ. ಸರಕಾರದಿಂದ ಆದೇಶದ ಪ್ರತಿ ಬಂದ ನಂತರ ಅದರಲ್ಲಿ ಯಾವ ಅಂಶ ಇದೆ ಎಂಬುದನ್ನು ನೋಡಬೇಕಾಗಿದೆ. ಸದ್ಯಕ್ಕೆ ಯಾವುದೇ ಆದೇಶ ಬಾರದ ಹಿನ್ನಲೆ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಪಿಟಿಸಿಎಲ್ ಮತ್ತು ಎಸ್ಕಾಂಗೆ ಶೇ.20ರಷ್ಟು ಏರಿಕೆ ಮಾಡಿ ನಮನ್ನು ಯಾಕೆ ಕಡೆಗಣಿಸಿದ್ದಾರೆ ಎಂದು ಅವರು ದೂರಿದ್ದಾರೆ.