ಉಡುಪಿ:ಅಕ್ರಮ ಮದ್ಯ ಮಾರಾಟ: ಮೂವರು ಪೊಲೀಸ್ ವಶಕ್ಕೆ
ಉಡುಪಿ ಮಾ.16 (ಉಡುಪಿ ಟೈಮ್ಸ್ ವರದಿ): ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಮದ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರೆ, ಬ್ರಹ್ಮಾವರ ,ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಅವರ ಬಳಿ ಇದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅನುವುಮಾಡಿಕೊಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಖಚಿತ ಮಾಹಿತಿ ಪಡೆದ ಪಡುಬಿದ್ರೆ ಪೊಲೀಸರು ಠಾಣಾ ವ್ಯಾಪ್ತಿಯ ಕಾಪು ತಾಲೂಕಿನ ನಂದಿಕೂರು ಗ್ರಾಮದ ಕೈಗಾರಿಕಾ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಸ್ಥಳೀಯ ಹರೀಶ ಪೂಜಾರಿ (48) ಎಂಬಾತನನ್ನು ಹಾಗೂ ಹೆಬ್ರಿ ಪೊಲೀಸರು ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೋಮೇಶ್ವರದ ಕಾಸನಮಕ್ಕಿ ಎಂಬಲ್ಲಿನ ಕಾಸನಮಕ್ಕಿ ಕಡೆಗೆ ಹೋಗುವ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಪ್ರಶಾಂತ ಪೂಜಾರಿ (44) ಎಂಬಾನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಆರೋಪಿಗಳ ಪೈಕಿ ಹರೀಶ ಪೂಜಾರಿಯಿಂದ 660 ರೂ. ನಗದು, ಸ್ಥಳದಲ್ಲಿದ್ದ ಮದ್ಯ ಮತ್ತು ಇತರ ವಸ್ತುಗಳನ್ನು ಹಾಗೂ ಪ್ರಶಾಂತ ಪೂಜಾರಿಯಿಂದ 336.00 ಮೌಲ್ಯದ ವಿವಿಧ ರೀತಿಯ ಮದ್ಯ ಮತ್ತು 120 ರೂ.ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರು ಗ್ರಾಮದ ಕೊಳಲಗಿರಿ ವೃತ್ತದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಹಾವಂಜೆ ಗ್ರಾಮದ ಸುಂದರ ಶೆಟ್ಟಿ (53) ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರೆ, ಬ್ರಹ್ಮಾವರ, ಹೆಬ್ರಿ ಠಾಣೆಯಲ್ಲಿ ತಲಾ 1 ರಂತೆ 3 ಪ್ರತ್ಯೇಕ ಪ್ರಕರಣ ದಾಖಲಾಗಿದೆ.