ಕಾಂಗ್ರೆಸ್‍ನ ಗ್ಯಾರಂಟಿ ಕಾರ್ಡ್ ಪ್ರಯೋಜನವಿಲ್ಲದ ವಿಸಿಟಿಂಗ್ ಕಾರ್ಡ್: ಸಿಎಂ ಬೊಮ್ಮಾಯಿ

ದಕ್ಷಿಣ ಕನ್ನಡ, ಮಾ.16 : ಕಾಂಗ್ರೆಸ್‍ನ ಗ್ಯಾರಂಟಿ ಕಾರ್ಡ್ ನ್ನು ಪ್ರಯೋಜನಕ್ಕೆ ಬಾರದ ವಿಸಿಟಿಂಗ್ ಕಾರ್ಡ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಇಂದು ಮಂಗಳೂರಿನ ಮೇರಿ ಹಿಲ್ಸ್ ಹೆಲಿಪ್ಯಾಡಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹತಾಶವಾಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಏಕೆ ಹತಾಶರಾಗಬೇಕು. ಜನರೇ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇವರ ಮಾತಿನ ಮೇಲೆ, ವಿಶ್ವಾಸ ವಿಲ್ಲ ಎಂದು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಗ್ಯಾರಂಟಿ ಕಾರ್ಡ್ ಹಿಂದೆ ಗೃಹ ಲಕ್ಷ್ಮಿ ಎಂದು ಬರೆದಿದ್ದಾರೆ. ಬ್ಯಾಂಕಿನಲ್ಲಿ ದುಡ್ಡಿಟ್ಟು ಕಾರ್ಡ್ ಕೊಟ್ಟರೆ ಬೆಲೆ ಇರುತ್ತದೆ. ಆದರೆ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಕಾರ್ಡ್ ಡೆಬಿಟ್, ಕ್ರೆಡಿಟ್ ಇಲ್ಲದ ಪ್ರಯೋಜನಕ್ಕೆ ಬಾರದ ವಿಸಿಟಿಂಗ್ ಕಾರ್ಡ್ ಇದ್ದಂತೆ ಎಂದರು.

ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್ ಎಲ್ಲದರಲ್ಲೂ ಮಾಡುತ್ತಿದೆ. ಟೋಲ್ ಬಗ್ಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಟೋಲ್ ಸಂಗ್ರಹವಾಗಿಲ್ಲವೇ? ಎಲ್ಲದರಲ್ಲೂ ರಾಜಕಾರಣ ಮಾಡುವ ಕೆಟ್ಟ ಪರಂಪರೆ ಕಾಂಗ್ರೆಸ್ ನಲ್ಲಿದೆ. ಸಮಸ್ಯೆ ಇದ್ದರೆ ಕುಳಿತು ಬಗೆಹರಿಸಬಹುದು. ಅವರು ಬಳಸುವ ಭಾಷೆ ಯಾವ ಕನ್ನಡಿಗರೂ ಒಪ್ಪುವುದಿಲ್ಲ. ಕಾಂಗ್ರೆಸ್ ನಲ್ಲಿ ಸಭ್ಯತೆಯ ದಿವಾಳಿಯಾಗಿದೆ ಎಂದರು.

ಮಾರ್ಚ್ 17 ಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದು, ಬಿಜೆಪಿ ಸಮೀಕ್ಷೆ ನಡೆಸುತ್ತಿದೆ. ಕಾಂಗ್ರೆಸ್ ಏನು ಮಾಡುತ್ತಾರೆ ಎನ್ನುವುದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ವೇಳಾಪಟ್ಟಿಯಂತೆ ನಾವು ಘೋಷಣೆ ಮಾಡುತ್ತೇವೆ ಎಂದರು. ಹಾಗೂ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಕುರಿತಂತೆ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲೂ ಪಕ್ಷ ಹಲವಾರು ತೀರ್ಮಾನವನ್ನು ಗೆಲ್ಲಲು ಮಾಡುತ್ತಾರೆ. ಅದೇನೂ ಹೊಸತಲ್ಲ ಎಂದು ಹೇಳಿದರು.

ಸಚಿವ ಸೋಮಣ್ಣ ಹಾಗೂ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಮಧ್ಯೆ ಭಿನ್ನಾಭಿಪ್ರಾಯ ಏನಿಲ್ಲ ಎಂದ ಅವರು. ಯಡಿಯೂರಪ್ಪ ಅವರೊಂದಿಗೆ ಯಾರದ್ದೂ ಭಿನ್ನಾಭಿಪ್ರಾಯ ಇಲ್ಲ. ಅವರೇ ಹೇಳಿದಂತೆ ತಂದೆ ಮಗನ ಸಂಬಂಧವಿದ್ದಂತೆ. ಕೆಲವು ವಿಚಾರ ಗಳಲ್ಲಿ ನಮ್ಮನ್ನು ಕೇಳಬೇಕೆಂದಿರುತ್ತದೆ. ಯಡಿಯೂರಪ್ಪ ಅವರು ಅತ್ಯಂತ ಎತ್ತರದ ಸ್ಥಾನದಲ್ಲಿರುವವರು. ಅವರೇ ಹೇಳಿರುವಂತೆ ಎಲ್ಲವೂ ಸರಿಯಾಗುತ್ತದೆ. ಚುನಾವಣೆ ಇದ್ದಾಗ ಪ್ರತಿಭಟನೆಗಳು ಹೆಚ್ಚಾಗುವುದು ಸಹಜ. ಎಲ್ಲರ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

Leave a Reply

Your email address will not be published. Required fields are marked *

error: Content is protected !!