ಹೆಬ್ರಿ: ಚಾರ ತೆಂಕಬೆಟ್ಟು ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ
ಹೆಬ್ರಿ ಮಾ.16 : ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದ ಚಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೆಟ್ಟು ಗ್ರಾಮಸ್ಥರು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚುನಾವಣಾ ಬಹಿಷ್ಕಾರ ಹಾಕುವುದಾಗಿ ಬ್ಯಾನರ್ ಅಳವಡಿಸಿರುವುದು ಕಂಡು ಬಂದಿದೆ.
ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ಬಗ್ಗೆ ತಿಳಿದ ಹೆಬ್ರಿ ತಾ.ಪಂ ಇಒ ಶಶಿಧರ್ ಕೆ.ಜೆ ಅವರು ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ್ದಾರೆ. ಶಶಿಧರ್ ಅವರು ಬೋರ್ವೆಲ್ ಅಳವಡಿಸಿದ್ದ ಜಾಗ ಹಾಗೂ ರಸ್ತೆ ಸಂಪರ್ಕದ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ನೀರಿನ ಸಂಪರ್ಕ ಹಾಗೂ ರಸ್ತೆ ವ್ಯವಸ್ಥೆ ಆಗುವತನಕ ಇಲ್ಲಿಯ ಮತದಾರರು ಮತದಾನ ಮಾಡುವುದಿಲ್ಲ ಹಾಗೂ ಬ್ಯಾನರ್ ತೆರವುಗೊಳಿಸುವುದಿಲ್ಲ ದಯಮಾಡಿ ನಮ್ಮನ್ನು ಓಲೈಸಲು ಯಾರು ಬರಬೇಡಿ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿದ ನಂತರವೇ ನಮ್ಮ ಹಕ್ಕು ಚಲಾಯಿಸುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಈ ಕುರಿತು ಪ್ರತಿಕ್ರಯಿಸಿದ ಇಒ ಶಶಿಧರ್ ಕೆ.ಜೆ ಅವರು, ಗ್ರಾಮಸ್ಥರು ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇನ್ನು ರಸ್ತೆ ನಿರ್ಮಾಣಕ್ಕೆ ಅರಣ್ಯ ನಿಯಮಗಳು ತೊಡಕಾಗಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದರು.
ಚಾರಾ ಗ್ರಾಮದ ತೆಂಕಬೆಟ್ಟು ಎಂಬಲ್ಲಿ ಸುಮಾರು 25 ಮನೆಗಳಿದ್ದು 150ಕ್ಕೂ ಹೆಚ್ಚು ಮತದಾರರಿದ್ದಾರೆ. ಇಲ್ಲಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಹಾಗೂ ನೀರನ್ನು ಕೊಡದೆ ಇಲ್ಲಿನ ಗ್ರಾಮಸ್ಥರು ವಂಚಿತರಾಗಿದ್ದಾರೆ ಆ ಕಾರಣದಿಂದ ನಾವು ಚುನಾವಣಾ ಬಹಿಷ್ಕಾರ ಹಾಕುವುದಾಗಿ ನಿರ್ಧರಿಸಿದ್ದೇವೆ. ನಮ್ಮ ರಸ್ತೆ ನಮ್ಮ ಹಕ್ಕು, ಇದು ಪ್ರತಿಭಟನೆ ಅಲ್ಲ ಹೋರಾಟ. ರಾಜಕಾರಣಿಗಳೇ ನಮ್ಮ ಮನೆಗೆ ಮತ ಕೇಳಲು ಬರಬೇಡಿ. ಹಾಗೆಯೇ ನಿಮ್ಮ ಕಾರ್ಯಕರ್ತರನ್ನು ಸಹ ಕಳುಹಿಸಬೇಡಿ. ಈ ಊರಿನ ನಾಗರಿಕರು ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ಬರೆದು ಬ್ಯಾನರ್ ಅಳವಡಿಸಿದ್ದಾರೆ.