ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಎದೆಗಾರಿಕೆ ಯಾರಿಗಾದರೂ ಇದೆಯಾ?: ಬಿ.ವೈ ವಿಜಯೇಂದ್ರ ಪ್ರಶ್ನೆ
ಹಾವೇರಿ ಮಾ.16 : ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಎದೆಗಾರಿಕೆ ಯಾರಿಗಾದರೂ ಇದೆಯಾ ? ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ರಾಣೆಬೆನ್ನೂರು ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಟೀಕೆ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ಇರಬೇಕು. ಇಂದು ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿಲ್ಲ. ಯಾವುದೇ ದೊಡ್ಡ ಸ್ಥಾನಮಾನದಲ್ಲಿ ಇಲ್ಲದಿದ್ದರೂ ಕೂಡ, ಆರೂವರೆ ಕೋಟಿ ಕನ್ನಡಿಗರು ತಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಕೊಟ್ಟಿದ್ದಾರೆ’. ಅವರು ಇಂದು ಮೌನವಾಗಿದ್ದಾರೆ ಅಂದರೆ, ಅದನ್ನು ಯಾರಾದರೂ ದೌರ್ಬಲ್ಯ ಎಂದು ಭಾವಿಸಿದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಇಷ್ಟುಸುಭದ್ರವಾಗಿ ನಿಲ್ಲಲು ಅಡಿಪಾಯ ಹಾಕಿದವರು ಯಡಿಯೂರಪ್ಪನವರು ಎಂದ ಅವರು, `ಈಗ ಯಾರು ಬಿಜೆಪಿ ನೋಡುತ್ತಿದ್ದಾರೋ ಅವರು ಭವ್ಯ ಭವನವನ್ನಷ್ಟೆ? ನೋಡುತ್ತಿದ್ದಾರೆ. ಆ ಭವನದ ಅಡಿಪಾಯ ಯಾರಿಗೂ ಕಾಣುವುದಿಲ್ಲ. ಬಿಜೆಪಿ ರಾಜ್ಯದಲ್ಲಿ ಇಷ್ಟುಸುಭದ್ರವಾಗಿ ನಿಂತಿದೆ ಎಂದರೆ ಅದಕ್ಕೆ ಅಡಿಪಾಯ ಹಾಕಿದವರು ಯಡಿಯೂರಪ್ಪ. ಯಡಿಯೂರಪ್ಪನವರು ರಾಜ್ಯದಲ್ಲಿ 30-40 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿಕೊಂಡು ನಾಡಿನಲ್ಲಿರುವ ರೈತರು, ಬಡವರು, ದೀನದಲಿತರ ಬಗ್ಗೆ ಕಾಳಜಿ ಇಟ್ಟುಕೊಂಡು ಸೈಕಲ್ ಜಾಥಾ, ಪಾದಯಾತ್ರೆ ಮಾಡಿದರು’ ಎಂದು ಹೇಳಿದರು.