ಗುಳಿಗ ದೈವದ ಬಗ್ಗೆ ವ್ಯಂಗ್ಯವಾದ ಹೇಳಿಕೆ: ಗೃಹಸಚಿವರ ವಿಡಿಯೋ ವೈರಲ್

ತೀರ್ಥಹಳ್ಳಿ ಮಾ‌.16: ಕರಾವಳಿಯ ಉಭಯ ಜಿಲ್ಲೆಗಳ ಆರಾಧ್ಯ ದೈವವಾದ ಗುಳಿಗ ದೈವದ ಆಧಾರಿತ  “ಶಿವಧೂತೆ ಗುಳಿಗೆ” ನಾಟಕದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ನೀಡಿರುವ ವ್ಯಂಗ್ಯವಾದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತೀರ್ಥಹಳ್ಳಿಯ ಎಪಿಎಂಸಿ ಸಮೀಪ ನಡೆದ ರೈತ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಗೃಹಸಚಿವರು ಹತ್ತು ಹಲವು ವಿಚಾರಗಳನ್ನು ಪ್ರಸ್ತಾಪಿಸಿ “ಮಹಿಳೆಯರ ಕಿವಿ ಮೇಲೆ ಜಾಗವೇ ಇಲ್ಲ. ತೊಗೊಂಡು ಹೋಗಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ ಕೊಟ್ಟಿದ್ದಾರೆ. ಇಲ್ಲಿ ನಾನು ನೋಡಿದೆ ನಿನ್ನೆಯಿಂದ ಎಂಥದೋ ಗುಳಿಗೆ, ಗುಳಿಗೆ ಅಂತ ಹಾಕಿದ್ದಾರೆ. ವಾಲ್‌ ಪೋಸ್ಟ್‌ನಲ್ಲಿ ನಿನ್ನೆ ರಾತ್ರಿ ಎಂಥದೋ ನಾಟಕ. ಬಹಳ ಅಪಾಯ. ಇವರು ಯಾವ ಗುಳಿಗೆ ಕೊಡ್ತಾರೆ ಅಂಥ ಗೊತ್ತಿಲ್ಲ. ಜಾಪಾಳ್‌ ಮಾತ್ರೆ ಗುಳಿಗೆ ಕೊಟ್ರು ಕೊಡಬಹುದು. ಏಕೆಂದರೆ ಇವರು ಹೊಸ ಹೊಸ ನಾಟಕಗಳನ್ನು ಶುರುಮಾಡಿದ್ದಾರೆ” ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸಿಗರಾಗಿ ತೀರ್ಥಹಳ್ಳಿಯಲ್ಲಿ ನೆಲೆಸಿರುವವರನ್ನು ಪರೋಕ್ಷವಾಗಿ ಆರಗ ಜ್ಞಾನೇಂದ್ರ ನಿಂದಿಸಿದರೆ ಎಂಬ ಚರ್ಚೆ ಇದೀಗ ಆರಂಭವಾಗಿದೆ.

ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳು ನಾಟಕ ರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ವಿಜಯಕುಮಾರ್‌ ಕೋಡಿಯಾಲಬೈಲು ನಿರ್ದೇಶನದ “ಶಿವದೂತೆ ಗುಳಿಗೆ” ಎಂಬ ತುಳು ನಾಟಕ ಏಳೆಂಟು ಸಾವಿರ ಪ್ರೇಕ್ಷಕರೆದುರು ಪ್ರದರ್ಶನಗೊಂಡು ದಾಖಲೆ ಬರೆದಿದೆ.

ಇದು ಆರಗ ಜ್ಞಾನೇಂದ್ರರ ಬದ್ಧ ರಾಜಕೀಯ ವೈರಿ ಕಿಮ್ಮನೆ ರತ್ನಾಕರ್‌ ಸಾರಥ್ಯದಲ್ಲಿ ನಡೆದಿದ್ದು, ಶ್ರದ್ಧಾ ಭಕ್ತಿಯಿಂದ ಆದಾಧಿಸುವ ದೈವವನ್ನು ಗೃಹ ಸಚಿವರು ಗುಳಿಗೆ ಎಂದು ಅಸಹನೆ, ವ್ಯಂಗ್ಯದಿಂದ ಮಾತನಾಡಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!