ಅಕ್ರಮ ಸಾಗಾಟದಲ್ಲಿ ವಶಪಡಿಸಿದ ಅಕ್ಕಿ ಎಪಿಎಲ್ ಕಾರ್ಡ್ ದಾರರಿಗೆ ವಿತರಣೆ
ಉಡುಪಿ ಮಾ.16 : ಅಕ್ರಮ ಸಾಗಾಟದ ವೇಳೆ ವಿವಿಧ ಕಡೆ ಸೀಜ್ ಆಗಿರುವ ಅಕ್ಕಿಯನ್ನು ತಾಲೂಕುವಾರು ಮಟ್ಟದಲ್ಲಿ ಎಪಿಎಲ್ ಕಾರ್ಡುದಾರರಿಗೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ವಿತರಿಸು ಕಾರ್ಯ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ, ಎಪಿಎಲ್ ಕಾರ್ಡ್‌ದಾರರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಅಕ್ಕಿ ಸಿಗುತ್ತಿಲ್ಲ. ಸರಕಾರದಿಂದ ಹಂಚಿಕೆಯೂ ಆಗುತ್ತಿಲ್ಲ. ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಪೂರೈಕೆ ಮಾಡುವ ಬಗ್ಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಗೆ ಜಿಲ್ಲೆಗಳಿಂದ ಪ್ರಸ್ತಾವನೆ ಹೋಗಿದೆ. ಆದರೆ, ಖರೀದಿ ಪ್ರಕ್ರಿಯೆ ನಡೆಯದೇ ಇರುವುದರಿಂದ ತಿಂಗಳ ಹಂಚಿಕೆ ಆಗುತ್ತಿಲ್ಲ. ಹೀಗಾಗಿ ಅಕ್ರಮ ಸಾಗಾಟದ ವೇಳೆ ವಶಪಡಿಸಿಕೊಂಡಿರುವ ಅಕ್ಕಿಯನ್ನು ಆಯಾ ತಾಲೂಕುಗಳಲ್ಲೇ ಬೇಡಿಕೆ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ರೀತಿ ಅಕ್ಕಿ ಹಂಚಿಕೆ ಕಾರ್ಯ ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ದ.ಕ. ಜಿಲ್ಲೆಯ ಕೆಲವು ತಾಲೂಕುಗಳಲ್ಲೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.