ಕೆಪಿಟಿಸಿಎಲ್, ಎಸ್ಕಾಂ ನೌಕರರ ವೇತನ ಹೆಚ್ಚಳ
ಬೆಂಗಳೂರು ಮಾ.15 : ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಎಲ್ಲಾ ಎಸ್ಕಾಂಗಳ ನೌಕರರ ವೇತನವನ್ನು ಹೆಚ್ಚಳ ಮಾಡಿ ಸರಕಾರ ಆದೇಶ ನೀಡಿದೆ.
ಈ ಬಗ್ಗೆ, ಇಂಧನ ಸಚಿವ ಸುನೀಲ್ ಕುಮಾರ್ ಆದೇಶ ಪ್ರಕಟಿಸಿದ್ದು, ಕವಿಪ್ರನಿನಿ ಹಾಗೂ ಎಸ್ಕಾಂಗಳಲ್ಲಿ ಈಗಿರುವ ವೇತನದ ಮೇಲೆ ಎಪ್ರೀಲ್ 2022 ರಿಂದ ಶೇ.20 ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಆದೇಶಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರು ಗುರುವಾರ ಇಡೀ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ಸ್ಥಗಿತ ಮಾಡಿ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಲೈನ್ಮ್ಯಾನ್ಗಳಿಂದ ಹಿಡಿದು ಎಂಜಿನಿಯರಳವರೆಗೆ ಸುಮಾರು 60 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದರು. ಶೇ. 40% ವೇತನ ಹೆಚ್ಚಳ ಆಗಬೇಕು. 2022ರ ಏಪ್ರಿಲ್ 1 ರಿಂದ ಬಾಕಿ ವೇತನ ಬಿಡುಗಡೆ ಮಾಡಬೇಕು. ತಕ್ಷಣವೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದ್ಯುತ್ ಕಂಪನಿಗಳ ಖಾಸಗೀಕರಣ ಉದ್ದೇಶದ ಪ್ರಸ್ತಾವಿತ ಮಸೂದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು.