ಇಂದ್ರಾಳಿ: ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು- ಕತರ್ನಾಕ್ ಕಳ್ಳಿಯರಿಬ್ಬರ ಬಂಧನ
ಮಣಿಪಾಲ ಮಾ.15 (ಉಡುಪಿ ಟೈಮ್ಸ್ ವರದಿ): ಮಣಿಪಾಲದ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್‍ನಲ್ಲಿದ್ದ 4 ಲಕ್ಷ ರೂ. ಮೌಲ್ಯದ ಚುನ್ನಾಭರಣ ಕಳವು ಗೈದ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ನಡೆದ 24 ಗಂಟೆಗಳೊಳಗೆ ಪೊಲೀಸರು ಇಬ್ಬರು ಕಳ್ಳಿಯರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಲಲಿತಾ ಬೋವಿ(41), ಸುಶೀಲಮ್ಮ ಬೋವಿ(64) ಬಂಧಿತ ಆರೋಪಿಗಳು. ಬಂಧಿತರಿಂದ ಕಳ್ಳತನ ನಡೆಸಿದ 4,03,000 ರೂ. ಮೌಲ್ಯದ 100 ಗ್ರಾಂ ಬಂಗಾರದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಇಂದು ಬೆಳಿಗ್ಗೆ 6:30 ಕ್ಕೆ ಮಣಿಪಾಲದ ಟೈಗರ್ ಸರ್ಕಲ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಮಧ್ಯಾಹ್ನದ ವೇಳೆ ಕಾಪುವಿನ ಪುನೀತ್ ವಂಸತ್ ಹೆಗ್ಡೆ ಅವರು ಮುಂಬೈಗೆ ಹೋಗುವ ಸಲುವಾಗಿ ಮಣಿಪಾಲದ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದ ವೇಳೆ ಕಳ್ಳರು ಇವರ ಬ್ಯಾಗ್ ನಲ್ಲಿ ಇದ್ದ 4,00,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 3000 ರೂ. ಮೌಲ್ಯದ ವಾಚ್ ನ್ನು ಕಳವು ಗೈದು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.