ನಮ್ಮ ಪಕ್ಷದವರ ಮೇಲೆ ಸಣ್ಣಪುಟ್ಟ ಆರೋಪ ಬಂದಿದೆ: ಸಚಿವ ಕೋಟ
ಉಡುಪಿ ಮಾ.15 : ನಮ್ಮ ಪಕ್ಷದವರ ಮೇಲೆ ಸಣ್ಣಪುಟ್ಟ ಆರೋಪ ಬಂದಿದೆ. ಆ ಬಗ್ಗೆ ಕಾನೂನು ಪ್ರಕಾರ ವ್ಯವಸ್ಥೆಯಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪಾರದರ್ಶಕ ಆಡಳಿತ, ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಮಾಡಿದ್ದೇವೆ. ಅದರ ಆಧಾರದಲ್ಲಿ ಲೋಕಾಯುಕ್ತ ಕೆಲಸ ಮಾಡಿದೆ. ಬಿಜೆಪಿ ಸರಕಾರ ಅಲ್ಲದೆ ಬೇರೆ ಆಡಳಿತದಲ್ಲಿ ಈ ರೀತಿ ಲೋಕಾಯುಕ್ತರು ಹೋಗಿ ಮಾಡಲು ಸಾಧ್ಯವಿಲ್ಲ ಎಂದರು.
ರೌಡಿಶೀಟರ್ ಫೈಟರ್ ರವಿಗೆ ಮೋದಿ ನಮಸ್ಕಾರ ಮಾಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಪ್ರಧಾನಮಂತ್ರಿಗೆ ಕೈಮುಗಿಯುತ್ತಾರೆ. ಯಾರೇ ಕೈಮುಗಿದರೂ ವಾಪಾಸು ಕೈಮುಗಿಯುವುದು ಪ್ರಧಾನ ಮಂತ್ರಿಗಳು ಇಟ್ಟುಕೊಂಡ ಸಂಪ್ರದಾಯ. ಆತ ಯಾವ ವ್ಯಕ್ತಿ, ಹೆಸರೇನು, ಯಾವ ಸೀಟು ಎಂಬುದು ಪ್ರಧಾನಿಗೆ ಗೊತ್ತಿರಲ್ಲ. ಆತ ರೌಡಿಶೀಟರ್ ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಯಾರನ್ನು ರಕ್ಷಣೆ ಮಾಡಲ್ಲ. ಏನಾದರೂ ಅಪರಾಧ ಮಾಡಿದರೆ ಸಂವಿಧಾನ ಪ್ರಕಾರ ಕ್ರಮ ಆಗುತ್ತದೆ ಎಂದು ತಿಳಿಸಿದರು.
ಇನ್ನು ಶಾಸಕ ಮಾಡಾಳ್ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಸ್ವಾಭಾವಿಕವಾಗಿ ಚರ್ಚೆ ಯಾಗುತ್ತಿದೆ ಎಂದ ಅವರು, ಆದರೆ ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ಮಾಡಿದವರು ಯಾರು? ಎಸಿಬಿಯನ್ನು ರಚನೆ ಮಾಡಿದವರು ಯಾರು ಎಂಬುದು ಕೂಡ ರಾಜ್ಯದ ಜನತೆಗೆ ಗೊತ್ತಿದೆ. ಲೋಕಾಯುಕ್ತಕ್ಕೆ ಜೀವ ಕೊಟ್ಟು ಶಕ್ತಿ ತುಂಬಿ ಹಲ್ಲು ಕೊಟ್ಟವರು ಬಿಜೆಪಿ, ಇಂಥವರ ಮೇಲೆ ದಾಳಿ ಮಾಡಿ ಇಂಥವರನ್ನು ಹಿಡಿಯಿರಿ ಎಂದು ನಾವು ಲೋಕಾಯುಕ್ತ ಮಾಡಿಲ್ಲ ಎಂದರು.