ಉದ್ಘಾಟನೆ ಮರುದಿನವೇ ಕಿತ್ತುಬಂದ ಬೆಂಗಳೂರು–ಮೈಸೂರು ಎಕ್ಸ್ ಪ್ರೆಸ್ ಹೈವೇ: ಫೋಟೊ ವೈರಲ್
ರಾಮನಗರ ಮಾ.15 : ಉದ್ಘಾಟನೆಯಾದ ಮರುದಿನವೇ ಡಾಂಬರ್ ಕಿತ್ತು ಬಂದು ಜಲ್ಲಿಕಲ್ಲುಗಳು ಕಾಣುತ್ತಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ಕಿತ್ತು ಬಂದ ಹಿನ್ನೆಲೆ ಈ ಜಾಗದಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದ್ದು, ರಸ್ತೆಯ ಬದಿಗೆ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಮನಗರ ಕಡೆಯಿಂದ ಬಿಡದಿ ಬೈಪಾಸ್ ರಸ್ತೆ ಮುಕ್ತಾಯದ ಜಾಗದಲ್ಲಿ ಸೇತುವೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಸೇತುವೆ ಆರಂಭದಲ್ಲಿ ರಸ್ತೆ ಕಿತ್ತು ಬಂದಿದ್ದು, ಈ ಹಿಂದೆ ಇದೇ ಜಾಗದಲ್ಲಿ ಹಲವು ವಾಹನಗಳು ಸ್ಕಿಡ್ ಆಗಿದ್ದವು ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿ, ‘ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇ 40% ಕಮಿಷನ್ ಬಿಟ್ಟು 80% ಕಮಿಷನ್ ತೊಗೊಂಡಿರಬೇಕು. ಇಷ್ಟೊಂದು ಕಳಪೆ ಕಾಮಗಾರಿ ಮಾಡಿದರೂ ಬಾಯಿ ಬಿಡದೇ ವಾಪಾಸ್ ಆಗಿದ್ದು ನೋಡಿದರೆ ಅವರಿಗೂ ಪಾಲು ಹೋಗಿರೋದು ಪಕ್ಕಾ ಅನ್ಸುತ್ತೆ’ ಎಂದು ಟೀಕಿಸಿ ಕಮೆಂಟ್ ಮಾಡಿದ್ದಾರೆ.