ವಿಶ್ವ ಗ್ಲುಕೋಮಾ ಸಪ್ತಾಹ: ಕೆ.ಎಂ.ಸಿಯಲ್ಲಿ ಉಚಿತ ತಪಾಸಣಾ ಶಿಬಿರ
ಉಡುಪಿ ಮಾ.13 (ಉಡುಪಿ ಟೈಮ್ಸ್ ವರದಿ) : ವಿಶ್ವ ಗ್ಲುಕೋಮಾ ಸಪ್ತಾಹ 2023 ರ ಅಂಗವಾಗಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ವಿಭಾಗ ಮತ್ತು ಆಪ್ಟೋಮೆಟ್ರಿ ವಿಭಾಗ –ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಜಾಗೃತಿ ಶಿಕ್ಷಣ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಕೆ.ಎಂ.ಸಿ ಮಣಿಪಾಲದ ಡೀನ್ ಡಾ. ಪದ್ಮರಾಜ ಹೆಗ್ಡೆ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ ಗ್ಲುಕೋಮಾದಿಂದ ನಿಧಾನವಾಗಿ ಸಂಪೂರ್ಣ ದೃಷ್ಟಿಯ ನಾಶಕ್ಕೆ ಕಾರಣವಾಗುತ್ತದೆ. ವಿಶ್ವ ಗ್ಲುಕೋಮಾ ಸಪ್ತಾಹವು ವಿಶ್ವದಾದ್ಯಂತ ತಡೆಗಟ್ಟಬಹುದಾದ, ಬದಲಾಯಿಸಲಾಗದ ಅಂಧತ್ವದ ಕುರಿತು ಗಮನ ಸೆಳೆಯುವ ಒಂದು ವಿಶಿಷ್ಟ ಅಭಿಯಾನವಾಗಿದೆ. ಈ ಗ್ಲುಕೋಮಾ ಕಾಯಿಲೆ ಇರುವ ಬಗ್ಗೆ ಅರಿವೇ ಇಲ್ಲದವರು , ಈ ಕಾಯಿಲೆಗೆ ಹೇಗೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಯದವರೂ ಸಾಕಷ್ಟಿದ್ದಾರೆ. ಆದ್ದರಿಂದ ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಗ್ಲುಕೋಮಾ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ್ಯದ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.
ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಡೀನ್ ಡಾ.ಜಿ.ಅರುಣ್ ಮಯ್ಯ ಅವರು ಗ್ಲುಕೋಮಾ ಕುರಿತಾದ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರು ಗ್ಲುಕೋಮಾ ಸಪ್ತಾಹ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿರುವ ಸ್ವಯಂಸೇವಕರಿಗೆ ಪ್ರಶಂಸಾ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಮಾಹೆಯ ಭೋದನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿಗಳು ಡಾ ಆನಂದ್ ವೇಣುಗೋಪಾಲ್, ನೇತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನೀತಾ ಕೆಐಆರ್, ಆಪ್ಟೋಮೆಟ್ರಿ ವಿಭಾಗ ಮುಖ್ಯಸ್ಥರಾದ ಡಾ. ಕೃತಿಕಾ ಎಸ್,ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಎಸ್ ಕಾಮತ್ ಉಪಸ್ಥಿತರಿದ್ದರು.
500 ಕ್ಕೂ ಹೆಚ್ಚು ಜನರು ಇಂದಿನ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದು, ಇದರ ಮುಂದಿನ ಭಾಗವಾಗಿ ಮಾ. 15ರಂದು ಡಾ ಟಿ ಎಂ ಎ ಪೈ ಉಡುಪಿಯಲ್ಲಿ ಮತ್ತು ಮಾ. 17ರಂದು ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.