ಉಡುಪಿ: ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಿಐಟಿಯು ಪ್ರತಿಭಟನೆ
ಉಡುಪಿ ಮಾ.13 (ಉಡುಪಿ ಟೈಮ್ಸ್ ವರದಿ): ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿ ಗರಿಷ್ಟ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಹಾಗೂ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ – 1948ಕ್ಕೆ ತಿದ್ದುಪಡಿ ಮಾಡಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023ನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಮಾಡಿರುವುದನ್ನು ವಿರೋಧಿಸಿ ಇಂದು ಸಿಐಟಿಯು ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, 1948ರ ಕಾಯ್ದೆಯು ‘ದಿನದ ಕೆಲಸದ ಅವಧಿಯ ಆರಂಭದಿಂದ ಗರಿಷ್ಟ 5 ಗಂಟೆ ಕೆಲಸಕ್ಕೆ 30 ನಿಮಿಷ ವಿರಾಮವನ್ನು ನೀಡಬೇಕೆಂದು ಹೇಳುತ್ತದೆ’. ಆದರೆ ಈ ತಿದ್ದುಪಡಿ ವಿಧೇಯಕದಲ್ಲಿ ಯಾವುದೇ ವಿರಾಮವಿಲ್ಲದೆ ದುಡಿಮೆ ಮಾಡುವ ಅವಧಿ 5 ಗಂಟೆಯಿಂದ 6 ಗಂಟೆಗೆ ಹೆಚ್ಚಿಸಿ ಹಾಗೂ ಕಾರ್ಮಿಕರ ದಿನದ ಕೆಲಸದ ಅವಧಿ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಕಾರ್ಮಿಕರ ಶೋಷಣೆಗೆ ಮತ್ತಷ್ಟು ಅವಕಾಶ ಕಲ್ಪಿಸಿದೆ. ಇದು ಕಾರ್ಮಿಕ ವಿರೋಧಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗದ ಕಡಿತ, ಕಡಿಮೆ ವೇತನಕ್ಕೆ ದುಡಿಮೆ, ಅಧಿಕ ಉತ್ಪಾದನೆ ಮಾಡಿಸಿಕೊಳ್ಳುವುದು ಈ ಅವಧಿಯಲ್ಲಿ ಹೆಚ್ಚಾಗಿದೆ. ಈ ತಿದ್ದುಪಡಿಗಳು ಕಾರ್ಮಿಕರ ಮೇಲೆ ವಿರಾಮವಿಲ್ಲದೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡ, ಕಾರ್ಮಿಕರ ಶೋಷಣೆ ಹೆಚ್ಚಿಸಲಿದೆ. ಹಲವು ಕಾರ್ಖಾನೆ ಮಾಲೀಕರಿಗೆ ಆರು ದಿನಗಳ ಉತ್ಪಾದನೆಯನ್ನು ನಾಲ್ಕು ದಿನಗಳಲ್ಲೇ ಉತ್ಪಾದನೆ ಮಾಡಿಸಿಕೊಳ್ಳಲು ಈ ಕಾಯ್ದೆಯಲ್ಲಿ ಅವಕಾಶ ಸಿಗಲಿದೆ. ಇದು ಕಾರ್ಮಿಕರ ಶ್ರಮದ ಅತೀವ ಶೋಷಣೆಯಾಗಿದೆ. ಮೂರು ಪಾಳಿಗಳಿಗೆ ಒದಗಿಸಬೇಕಾದ ಸಾರಿಗೆ ಸೌಲಭ್ಯ ಹಾಗೂ ಕ್ಯಾಂಟೀನ್ ಮತ್ತು ಇನ್ನಿತರ ಸೌಲಭ್ಯಗಳನ್ನು ಉಳಿಸಲು ಇದು ಮಾಲೀಕರಿಗೆ ದಾರಿಮಾಡಿಕೊಡಲಿದೆ. ಜತೆಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಹೇಳಿದರು.
ಚಾರಿತ್ರಿಕ 8 ಗಂಟೆ ಕೆಲಸ, 8 ಗಂಟೆ ವಿರಾಮ ಮತ್ತು 8 ಗಂಟೆ ಮನೋರಂಜನೆ ಎಂಬ ಜೀವಪರ, ವೈಜ್ಞಾನಿಕ, ತಾತ್ವಿಕ ನೆಲೆಯನ್ನು ಕಳಚಿ ಹಾಕಿ, ಕಾರ್ಪೋರೇಟ್ ಬಂಡವಾಳಕ್ಕೆ ಲಾಭ ಮಾಡಿಕೊಡುವ ನವ ಉದಾರವಾದಿ ಆರ್ಥಿಕ ನೀತಿಯ ಜಾರಿಯ ನಿಟ್ಟಿನಲ್ಲಿ ತಮ್ಮ ಸರ್ಕಾರವು ಈ ತಿದ್ದುಪಡಿ ಮಾಡಿದೆ. ದುಡಿಯುವ ಮಹಿಳೆಯರ ಸುರಕ್ಷತೆ, ಕೆಲಸದ ಭದ್ರತೆ, ಸಾರಿಗೆ, ಸೇವಾ ಸೌಲಭ್ಯಗಳಿಂದ ಮಹಿಳಾ ಕಾರ್ಮಿಕರು ವಂಚಿತರಾಗಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಕಿರುಕುಳ ಹೆಚ್ಚಾಗಿದೆ. ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದ್ದು, ಕೆಲಸದ ಅಭದ್ರತೆಯಿಂದಾಗಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಿರುವಾಗ ಮಹಿಳಾ ಕಾರ್ಮಿಕರನ್ನು ರಾತ್ರಿಪಾಳಿಯಲ್ಲಿ ದುಡಿಮೆ ಮಾಡಿಸಿಕೊಳ್ಳಲು ಕಾರ್ಖಾನೆ ಮಾಲೀಕರಿಗೆ ಅನುವುಗೊಳಿಸಿ ತಿದ್ದುಪಡಿ ಮಾಡಿರುವುದು ಮಹಿಳಾ ಕಾರ್ಮಿಕರನ್ನು ದುಡಿಮೆಯಿಂದ ಹೊರಗಿಡುವ ಹುನ್ನಾರವಾಗಿದೆ ಎಂದರು.
ಚುನಾವಣೆ ಹೊಸ್ತಿಲಲ್ಲಿ ಬಂಡವಾಳಗಾರರನ್ನು ತೃಪ್ತಿಗೊಳಿಸಲು ಈ ತಿದ್ದುಪಡಿ ವಿಧೇಯಕವನ್ನು ಶಾಸನ ಸಭೆಯಲ್ಲಿ ಅಂಗೀಕಾರ ಮಾಡಿರುತ್ತೀರಿ. ಇದು ನಿಮ್ಮ ಕಾರ್ಮಿಕ ವಿರೋಧಿ ನಿಲುವನ್ನು ದೃಢಪಡಿಸಿದೆ. ಆದ್ದರಿಂದ ಕಾರ್ಖಾನೆಗಳಲ್ಲಿ ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಗೆ, ಕಾರ್ಮಿಕರ ಮೇಲೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡಗಳನ್ನು ಕಡಿಮೆ ಮಾಡಲು, ಕಾರ್ಮಿಕರ ಜೀವನವನ್ನು ಉತ್ತಮಪಡಿಸಲು ವಾರಕ್ಕೆ 5 ದಿನ ಕೆಲಸ, ದಿನಕ್ಕೆ 7 ಗಂಟೆ, ವಾರಕ್ಕೆ 35 ಗಂಟೆ ಕೆಲಸದ ಅವಧಿ ನಿಗದಿಪಡಿಸಿ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಎರಡು ರೇಷನ್ ಕಾರ್ಡ್ ಇದ್ದರೂ ಫೋಟೋ ಇಲ್ಲದಿದ್ದರೂ ವಿದ್ಯಾರ್ಥಿವೇತನ ಅರ್ಜಿ ಹಾಕಲು ಅವಕಾಶ ಕಲ್ಪಿಸಬೇಕು. ಎಸ್‍ಎಸ್‍ಪಿ ಪೋರ್ಟ್‍ಲ್‍ನಲ್ಲಿ ಸಲ್ಲಿಸಿ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ ಹಣ ಜಮಾ ಮಾಡಬೇಕು. ಕೇವಲ ಕಾರ್ಮಿಕ ಕಛೇರಿಗಳು ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕ ಸಂಘಗಳು, ನೋಂದಾಯಿತ ಬಿಲ್ಡರ್‍ಗಳು ಮಾತ್ರವೇ ನೀಡುವ ‘ಉದ್ಯೋಗ ಪ್ರಮಾಣ ಪತ್ರ’ಗಳನ್ನು ಪರಿಗಣಿಸಿ ನೋಂದಣಿ ಮಾಡಬೇಕು. ನಕಲಿ ಕಾರ್ಡುಗಳನ್ನು ವ್ಯಾಪಕವಾಗಿ ನಡೆಸುತ್ತಿರುವ ಸಿಎಸ್‍ಸಿ ಸೆಂಟರ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿಗೆ ಇರುವ ಅವಕಾಶವನ್ನು ರದ್ದುಪಡಿಸಬೇಕು. ಮಂಡಳಿಯಿಂದ ಈಗ ಜಾರಿಯಲ್ಲಿರುವ ‘ಸಿಜಿಎಚ್ ಆಧಾರಿತ ವೈದ್ಯಕೀಯ ಮರುಪಾವತಿ’ ಯೋಜನೆ ರದ್ದು ಮಾಡಿ ಎಲ್ಲ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ನಗದು ರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು. ಮಂಡಳಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಸದ್ಯ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸಿಬ್ಬಂದಿಯನ್ನು ಖಾಯಂ ಮಾಡಬೇಕು ಎಂಬುದು ಸೇರಿದಂತೆ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿಯ ಮೂಲಕ ಸರಕಾರಕ್ಕೆ ಕಾರ್ಮಿಕರ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.