ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ?: ಆಝಾನ್ ವಿರುದ್ಧ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಮಂಗಳೂರು ಮಾ.13: ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಎಂದು ಹೇಳುವ ಮೂಲಕ ಮಾಜಿ ಸಚಿವ ಈಶ್ವರಪ್ಪ ಅವರು ಆಝಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾವೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಈಶ್ವರಪ್ಪ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಮಸೀದಿಯಿಂದ ಆಝಾನ್ ಕೇಳಿಬಂದಿದೆ. ಇದಕ್ಕೆ ಸಿಟ್ಟಾದ ಈಶ್ವರಪ್ಪ ”ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ?” ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೂ ”ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ. ಇದರಲ್ಲೇನು ಅನುಮಾನ ಬೇಡ ಎಂದು ಹೇಳಿದ್ದಾರೆ.
ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ. ”ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂಥಹ ದೇಶ ಭಾರತ ಮಾತ್ರ. ಆದರೆ ಮೈಕ್ ಹಿಡ್ಕೊಂಡು ಮಾತ್ರ ಹೇಳಿದರೆ ಅವನಿಗೆ ಕೇಳುತ್ತದೆ ಎನ್ನುವುದಾದರೆ, ಅವನು ಕಿವುಡನಾ ಎಂದು ಕೇಳಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು” ಎಂದು ತಿಳಿಸಿದ್ದಾರೆ.
ಇನ್ನು ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮುಸ್ಲಿಮರ ಅಝಾನ್ ಕುರಿತು ಹೇಳಿಕೆ ವಿವಾದವಲ್ಲ, ನಾನು ಧಾರ್ಮಿಕ ನಿಂದನೆ ಮಾಡಿಲ್ಲ, ಅಲ್ಲಾಹುವಿನ ಬಗ್ಗೆ ಅವಹೇಳನ ಮಾಡಿಲ್ಲ. ಆದರೆ ಅಝಾನ್ ವಿಚಾರದಲ್ಲಿ ಯಾರಾದರೂ ಮಾತನಾಡಲೇಬೇಕಿತ್ತು, ಮಾತನಾಡಿದ್ದೇನೆ. ಅದು ಶ್ರೀಸಾಮಾನ್ಯನ ಅನಿಸಿಕೆ, ನಾನು ಅದನ್ನು ವ್ಯಕ್ತಪಡಿಸಿದ್ದೇನೆ” ಎಂದಿದ್ದಾರೆ. ಹಾಗೂ ”ಲೌಡ್ ಸ್ಪೀಕರ್ ನಲ್ಲಿ ಅಝಾನ್‌ನಿಂದ ಅನೇಕರಿಗೆ ತೊಂದರೆಯಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ಅದರ ವಿರುದ್ಧವೇ ಇದೆ. ಮುಸ್ಲಿಂ ನಾಯಕರು ಈ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಬೇಕು” ಎಂದರು.
ಇದೇ ವೇಳೆ ”ನಾನು ಮುಸ್ಲಿಮರ ಮತಗಳು ಬೇಡವೇ ಬೇಡ ಎಂದಿಲ್ಲ ಎಂದು ಅವರು, ರಾಷ್ಟ್ರೀಯವಾದಿ ಮುಸ್ಲಿಮರ ಮತ ಇರಲಿ. ಚುನಾವಣೆ ಸಂದರ್ಭದಲ್ಲಿ ಮಾತನಾಡಿ ವಿವಾದ ಮಾಡುವ ವಿಚಾರ ಇಲ್ಲಿ ಬರುವುದೇ ಇಲ್ಲ. ಗೋಹತ್ಯೆ ತಡೆ ಕಾಯ್ದೆ, ಮತಾಂತರ ತಡೆ ಕಾಯ್ದೆ, ತ್ರಿವಳಿ ತಲಾಖ್ ರದ್ದು ಇತ್ಯಾದಿಗಳೆಲ್ಲವೂ ನಮ್ಮ ಸರಕಾರದ ಸಾಧನೆಗಳು. ಎಲ್ಲಾ ರಾಷ್ಟ್ರೀಯವಾದಿ ಮುಸ್ಲಿಮರೂ ಅದನ್ನು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಇಂತಹ ವಿಚಾರದಲ್ಲಿ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳಿಗೆ ವಂಚನೆ ಮಾಡುತ್ತಾ ಬಂದಿದೆ” ಎಂದು ಟೀಕಿಸಿದರು.