ಪಡುಬಿದ್ರೆ: ಬಸ್ ಟೈಮಿಂಗ್ ವಿಚಾರಕ್ಕೆ ಹೊಯಿಕೈ -ದೂರು ದಾಖಲು
ಪಡುಬಿದ್ರಿ ಮಾ.13 (ಉಡುಪಿ ಟೈಮ್ಸ್ ವರದಿ): ಬಸ್ಸಿನ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಬಸ್ಸಿನ ನಿರ್ವಾಹಕ ಮತ್ತು ಟೈಮ್ ಕೀಪರ್ ನಡುವೆ ಬಸ್ ನಿಲ್ದಾಣದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಪಡುಬಿದ್ರೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಂಗಳೂರು-ಕುಂದಾಪುರ ಮಾರ್ಗದ ಎಕ್ಸ್ ಪ್ರೆಸ್ ಬಸ್ಸಿನ ನಿರ್ವಾಹಕ ಕಾಪುವಿನ ಮಲ್ಲಾರು ಗ್ರಾಮದ ಶಮೀಯುಲ್ಲಾ ಅವರು ನೀಡಿದ ದೂರಿನ ಪ್ರಕಾರ, ಎಂದಿನಂತೆ ನಿನ್ನೆ ಮಧ್ಯಾಹ್ನದ ವೇಳೆ ಇವರು ಕುಂದಾಪುರದಿಂದ ಹೊರಟು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಬಸ್ಸು ನಿಲ್ದಾಣಕ್ಕೆ ಬಂದು 3.38ರ ವೇಳೆ ಬಸ್ಸು ಹೊರಡುವ ಸಮಯ ಅಲ್ಲಿನ ಟೈಂ ಕೀಪರ್ ಮಹೇಶ್ ಎಂಬಾತನು ಬಸ್ಸಿನ ಮುಂದೆ ಬಂದು ಬಸ್ ಮುಂದೆ ಹೋಗದಂತೆ ತಡೆದಿದ್ದಾನೆ. ಆಗ ಶಮೀಯುಲ್ಲಾ ರವರು ಆತನನ್ನು ಕೇಳುತ್ತಿದ್ದಾಗ, ಮಹೇಶನು ಶಮೀಯುಲ್ಲಾ ರವರನ್ನು ಉದ್ದೇಶಿಸಿ, ಅವಾಚ್ಯವಾಗಿ ಬೈಯುತ್ತಾ, ಶಮೀಯುಲ್ಲಾ ರವರನನ್ನು ದೂಡಿ ಹೊಡೆದು, ಶಮೀಯುಲ್ಲಾ ಹಾಗೂ ಬಸ್ಸಿನ ಚಾಲಕನಿಗೆ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿ ಬಸ್ ನಿಲ್ದಾಣದ ಟೈಂ ಕೀಪರ್ ಬಂಟ್ವಾಳದ ಬಾಳೆಪುಣಿ ಗ್ರಾಮದ ಮಹೇಶ್ ಅವರು ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಅದರಂತೆ ಕಾಪು ತಾಲೂಕಿನ ನಡ್ಸಾಲು ಗ್ರಾಮದ ಪಡುಬಿದ್ರಿಯ ಬಸ್ಸು ನಿಲ್ದಾಣದಲ್ಲಿ ಟೈಂ ಕೀಪರ್ ಆಗಿ ಕೆಲಸ ಮಾಡಿಕೊಂಡಿರುವ ಇವರು ಎಂದಿನಂತೆ ತಮ್ಮ ಕರ್ತವ್ಯದಲ್ಲಿ ಇದ್ದ ವೇಳೆ ಮಧ್ಯಾಹ್ನ 3.37ರ ಸಮಯಕ್ಕೆ ಗಣೇಶ್ ಹೆಸರಿನ ಎಕ್ಸ್‍ಪ್ರೆಸ್ ಬಸ್ಸು ಉಡುಪಿ ಕಡೆಯಿಂದ ಪಡುಬಿದ್ರಿಯ ಬಸ್ಸು ನಿಲ್ದಾಣಕ್ಕೆ ಬಂದಿದೆ. ಈ ಬಸ್ 15:38 ಗಂಟೆಗೆ ಬಿಡಬೇಕಾಗಿದ್ದು, ಮಹೇಶ ರವರು ಹೊರಡುವಂತೆ ಚಾಲಕನಿಗೆ ಸೂಚಿಸಿದರೂ ಕೂಡಾ ಹೊರಡದೇ ಇದ್ದುದರಿಂದ, ಮಹೇಶ್ ಇವರು ಬಸ್ಸಿನ ಎದುರು ಬಂದು ಹಿಂದಿನಿಂದ ಬರುವ ಬಸ್ಸಿಗೆ ಕೆಲಸ ಮಾಡುತ್ತಿರುವಾಗ ಗಣೇಶ್ ಬಸ್ಸಿನ ನಿರ್ವಾಹಕ ಶಮೀಯುಲ್ಲಾ ಎಂಬುವರು ಇವರ ಬಳಿ ಬಂದು, ಅಡ್ಡಗಟ್ಟಿ ಬೈದು ಹೊಡೆದು ಬೆದರಿಕೆ ಹಾಕಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಎರಡು ದೂರು ಪ್ರತಿದೂರು ದಾಖಲಾಗಿದೆ.