ವೈಕುಂಠ ಸಮಾರಾಧನೆಯ ದಿನ ಮೃತ ವ್ಯಕ್ತಿ ಪ್ರತ್ಯಕ್ಷ: ಮಂಗಳೂರಿನಲ್ಲೊಂದು ಅಚ್ಚರಿ ಘಟನೆ
ಮಂಗಳೂರು(ಉಡುಪಿ ಟೈಮ್ಸ್ ವರದಿ): ಮೃತಪಟ್ಟ ವ್ಯಕ್ತಿಯ ಸಮಾರಾಧನೆ ವೇಳೆಯಲ್ಲಿ ಅದೇ ವ್ಯಕ್ತಿ ಪ್ರತ್ಯಕ್ಷನಾದ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ ಎಂಬ ವ್ಯಕ್ತಿ ಜನವರಿ 26 ರಂದು ನಾಪತ್ತೆಯಾಗಿದ್ದರು. ಅವರ ಪತ್ತೆಗೆ ಹುಡುಕಾಟ ನಡೆಸಿದರೂ ಶ್ರೀನಿವಾಸ ಅವರು ಪತ್ತೆಯಾಗಿರಲಿಲ್ಲ. ಈನಡುವೆ ಫೆಬ್ರವರಿ 3 ರಂದು ಕಲ್ಲುಂಜಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು. ಆದ್ದರಿಂದ ಕುಟುಂಬದವರು ಶ್ರೀನಿವಾಸ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಆದರೆ, ಮನೆಯವರು ಮೃತಪಟ್ಟಿದ್ದಾನೆ ಎಂದು ತಿಳಿದಿದ್ದ ವ್ಯಕ್ತಿ ಅಸಲಿಗೆ ಮೃತಪಟ್ಟಿರಲಿಲ್ಲ. ಅಲ್ಲದೆ, ಈ ಬಗ್ಗೆ ಜ್ಯೋತಿಷಿಯೊಬ್ಬರ ಬಳಿ ಪ್ರಶ್ನೆ ಕೇಳಿದಾಗ ಶ್ರೀನಿವಾಸ ಮೃತಪಟ್ಟಿಲ್ಲ. ಆತ ಬರುತ್ತಾನೆ ಎಂದು ಜ್ಯೋತಿಷಿ ತಿಳಿಸಿದ್ದಾರೆ. ಆದರೆ 10 ದಿನ ಕಳೆದರೂ ಶ್ರೀನಿವಾಸ ಮರಳಿ ಬಾರದ ಕಾರಣ ಮನೆಯವರು ವೈಕುಂಠ ಸಮಾರಾಧನೆ ನಡೆಸಿದ್ದಾರೆ. ಈ ವೇಳೆ ಶ್ರೀನಿವಾಸ ಮನೆಗೆ ಮರಳಿದ್ದಾರೆ ಎಂದು ಹೇಳಲಾಗಿದೆ