ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ
ಉಡುಪಿ ಮಾ.13(ಉಡುಪಿ ಟೈಮ್ಸ್ ವರದಿ) : ಯಕ್ಷಗಾನ ಕಲಾರಂಗ ಉಡುಪಿ ಇದರ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ರಮದ ಭಾಗವಾದ ಮನೆಗಳ ನಿರ್ಮಾಣ ಕಾರ್ಯಕ್ಕೆ ಉಡುಪಿಯ ಸಂತೆಕಟ್ಟೆಯಲ್ಲಿ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚಾಲನೆ ನೀಡಿದರು
ಉಡುಪಿ ಸಂತೆಕಟ್ಟೆಯಲ್ಲಿ ವಿದ್ಯಾಪೋಷಕ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹರ್ಷಿತಾ ಶೆಟ್ಟಿಯ ಮನೆ ನಿರ್ಮಾಣದ ಮುಹೂರ್ತದ ಸಂದರ್ಭದಲ್ಲಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ ಶ್ರೀಗಳು ಮಾತನಾಡಿ ಶ್ರೀಕೃಷ್ಣನ ಉಪದೇಶವನ್ನು ತನ್ನ ಸಮಾಜಮುಖಿ ಕಾರ್ಯಚಟುವಟಿಕೆಯ ಮೂಲಕ ನಿರ್ವಹಿಸುತ್ತಿರುವ ವಿಶಿಷ್ಟ ಸಂಸ್ಥೆ ಯಕ್ಷಗಾನ ಕಲಾರಂಗ.ಈ ಸಂಸ್ಥೆಯಿಂದ ನಾವು ಪ್ರೇರಣೆಗೊಂಡಿದ್ದೇವೆ. ಮನೆ ಬೇಗನೆ ಪೂರ್ಣಗೊಂಡು,ಎಲ್ಲರಿಗೂ ಶ್ರೇಯಸ್ಸಾಗಲಿ ಎಂದು ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್, ಹಿರಿಯರಾದ ಯು.ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ನಾರಾಯಣ ಎಂ.ಹೆಗಡೆ, ಬಿ.ಭುವನ ಪ್ರಸಾದ ಹೆಗ್ಡೆ,ಹೆಚ್. ಏನ್.ಶೃಂಗೇಶ್ವರ, ಪೃಥ್ವಿರಾಜ್ ಕವತ್ತಾರ್,ಅಶೋಕ ಎಂ, ರಮಾನಾಥ ಶಾನಭಾಗ್, ಕಿಶೋರ್ ಸಿ.ಉದ್ಯಾವರ,ಸುದರ್ಶನ ಬಾಯಿರಿ ಉಪಸ್ಥಿತರಿದ್ದರು.
ಎರಡು ತಿಂಗಳ ಹಿಂದೆ ಹರ್ಷಿತಾಳ ತಂದೆಗೆ ವಾಹನ ಅಪಘಾತವಾಗಿದ್ದು,ತಲೆಗೆ ಎರಡೆರಡು ಶಸ್ತ್ರ ಚಿಕಿತ್ಸೆಗಳಾಗಿ ಕುಟುಂಬ ತೀರಾ ಸಂಕಷ್ಟದಲ್ಲಿ ಇದ್ದುದನ್ನು ಗಮನಿಸಿ ಸಂಸ್ಥೆ ಸುಮಾರು 6 ಲಕ್ಷ ರೂ. ವೆಚ್ಚದ ಗೃಹ ನಿರ್ಮಾಣಕ್ಕೆ ಮುಂದಾಗಿದೆ. ಇದರೊಂದಿಗೆ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ 13 ಮನೆಗಳ ನಿರ್ಮಾಣ ಕಾರ್ಯ ಅಧ್ಯಕ್ಷರಾದ ಎಂ. ಗಂಗಾಧರ್ ರಾವ್ ಅವರ ನೇತೃತ್ವದಲ್ಲಿ ಆರಂಭಗೊಂಡಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳ್ಳಬೇಕಾಗಿದೆ.
ಯಕ್ಷಗಾನ ಕಲಾರಂಗವು ಇಲ್ಲಿಯ ತನಕ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗಾಗಿ 37 ಮನೆಗಳನ್ನು ನಿರ್ಮಿಸಿದ್ದು,ಇದೀಗ ಈ ಮೇ ಒಳಗೆ ಮತ್ತೆ ಹದಿಮೂರು ಮನೆಗಳ ನಿರ್ಮಾಣಕಾರ್ಯದ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.