ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಎಲ್ಲೆಡೆ ಬಿಗಿ ಭದ್ರತೆ
ಬೆಂಗಳೂರು, ಮಾ.9 : ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಇಂದಿನಿಂದ(ಮಾ.9) ಆರಂಭವಾಗಿದೆ.
ರಾಜ್ಯದ 1,109 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5,716 ಕಾಲೇಜುಗಳ ವಿದ್ಯಾರ್ಥಿಗಳು ಬರೆಯಲಿದ್ದು, ಬೆಳಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ನಡೆಲಿದೆ. 7,26,195 ವಿದ್ಯಾರ್ಥಿಗಳಲ್ಲಿ 3,63,698 ಬಾಲಕರು ಮತ್ತು 3,62,497 ಬಾಲಕಿಯರು ಪರೀಕ್ಷೆ ಬರೆಯಲು ನೋಂದಾಯಿಸಿ ಕೊಂಡಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರವಹಿಸಲು 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ ಮತ್ತು 2373 ವಿಶೇಷ ಜಾಗೃತ ದಳದವರನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈ ವರ್ಷ ಕರ್ನಾಟಕ ಸೆಕ್ಯೂರ್ ಎಕ್ಸಾಂ ಸಿಸ್ಟಂ ಅನ್ನು ಮುಂದುವರಿಸಿದ್ದು, ಇದರ ನಿರ್ವಹಣೆಗೆ ಮಂಡಳಿಯಲ್ಲೇ ಸಿಸಿಟಿವಿ ನಿಗಾ ಕೇಂದ್ರ ರೂಪಿಸಿದೆ. ಇಲ್ಲಿ 24*7 ಕಣ್ಗಾವಲಿನಲ್ಲಿರಲಿದೆ. ಎಂದಿನಂತೆ ಟ್ಯೂಷನ್ ಸೆಂಟರ್, ತರಬೇತಿ ಕೇಂದ್ರಗಳು, ಜೆರಾಕ್ಸ್ ಅಂಗಡಿಗಳು, ಸೈಬರ್ ಕೇಂದ್ರಗಳು, ಕಂಪ್ಯೂಟರ್ ಕೇಂದ್ರ ಮತ್ತು ಗೇಮ್ ಸೆಂಟರ್ಗಳನ್ನು ಬಂದ್ ಮಾಡಿಸಿ ನಿಗಾವಹಿಸಲು ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.
ಕೃಪಾಂಕ ವಿಚಾರ ಕಳೆದ ಬಾರಿಯ ನಿಯಮವೇ ಈ ವರ್ಷ ಕೂಡ ಅನ್ವಯವಾಗಲಿದೆ. ವಿದ್ಯಾರ್ಥಿಗಳು ಮೊದಲು ಪರೀಕ್ಷೆ ಕಡೆ ಗಮನ ನೀಡಿ ಚೆನ್ನಾಗಿ ಬರೆಯಿರಿ. ಪರೀಕ್ಷೆ ವೇಳೆ ಕೃಪಾಂಕದ ಬಗ್ಗೆ ಆಲೋಚನೆ ಬೇಡ. ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ರವಾನಿಸುವವರ ಮೇಲೆ ಕ್ರಮ ಜರುಗಿಸಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭದ್ರತಾ ಕೇಂದ್ರಗಳ ಬಳಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗದವರ ಗಸ್ತು ನಿರ್ವಹಣೆ ಮಾಡಲಿದ್ದು, ಅನುಮಾನಸ್ಪದವಾಗಿ ನಡೆದುಕೊಳ್ಳುವವರನ್ನು ಬಂಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.