ನಾಳೆ ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ತಂಡ ಭೇಟಿ

ಬೆಂಗಳೂರು ಮಾ.8 (ಉಡುಪಿ ಟೈಮ್ಸ್ ವರದಿ): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಪೂರ್ವಸಿದ್ಧತೆ ವೀಕ್ಷಣೆಗಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ನೇತೃತ್ವದ ತಂಡ ಮಾರ್ಚ್ 9ರಂದು ಬೆಂಗಳೂರಿಗೆ ಆಗಮಿಸಲಿದೆ.

ಬೆಂಗಳೂರಿಗೆ ಆಗಮಿಸಲಿರುವ ಚುನಾವಣಾ ಆಯುಕ್ತರಾದ ಅನೂಪಚಂದ್ರ ಪಾಂಡೆ, ಅರುಣ್ ಗೋಯಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ತಂಡ ಮಾ.9 ರಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಜೊತೆ ಸಭೆ ನಡೆಸಿದ ನಂತರ ರಾಜಕೀಯ ಪಕ್ಷಗಳೊಂದಿಗೆ ಮಹತ್ವದ ಸಭೆ ನಡೆಸಿ ಅವರಿಂದ ಸಲಹೆ, ಅಭಿಪ್ರಾಯ ಪಡೆಯಲಿದ್ದಾರೆ. ಈ ಸಭೆಯನ್ನು ವಿಕಾಸ ಸೌಧದ ಕೊಠಡಿ ಸಂಖ್ಯೆ 422ರಲ್ಲಿ ಕರೆಯಲಾಗಿದೆ ಎಂದು ತಿಳಿದು ಬಂದಿದೆ.

ಸಂಜೆ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ ಹಮ್ಮಿಕೊಂಡಿರುವ ‘ಪ್ರಜಾಪ್ರಭುತ್ವದ ಒಳಗೊಳ್ಳುವಿಕೆ ಮತ್ತು ಸಮಗ್ರತೆ’ ವಿಷಯ ಕುರಿತ ವಿಚಾರ ಸಂಕೀರ್ಣದಲ್ಲಿ ಹಲವು ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯುಕ್ತರು ನೇರವಾಗಿ ಹಾಗೂ ವಿಡಿಯೊ ಸಂವಾದದ ಮೂಲಕ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 10 ರಂದು ರಾಜ್ಯದ ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಯಲಿದೆ. ಸಂಜೆ ನಗರದ ಐಐಎಸ್‌ಸಿ ಆವರಣದಲ್ಲಿರುವ ಟಾಟಾ ಸಭಾಂಗಣದಲ್ಲಿ ನಡೆಯುವ ಮತದಾರರ ಜಾಗೃತಿ ಹಾಗೂ ವಿಶೇಷ ಸಂವಾದದಲ್ಲಿ ಭಾಗವಹಿಸುವರು.  ಬಳಿಕ ಮಾರ್ಚ್ 11ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!