ಲಂಚ ಪ್ರಕರಣ: ಬಿಜೆಪಿ ಶಾಸಕ ವಿರೂಪಾಕ್ಷಪ್ಪಗೆ ಮಧ್ಯಂತರ ನಿರೀಕ್ಷಣಾ ಜಾಮೀನು
ಬೆಂಗಳೂರು, ಮಾ.7 : ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಇಂದು ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿರೂಪಾಕ್ಷಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠವು ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದೆ.
5 ಲಕ್ಷ ರೂ. ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಆಧಾರದಲ್ಲಿ ವಿರೂಪಾಕ್ಷಪ್ಪ ಅವರಿಗೆ ಜಾಮೀನು ನೀಡಲಾಗಿದೆ. ಅಲ್ಲದೇ, ಆದೇಶ ತಲುಪಿದ 48 ಗಂಟೆಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚನೆ ನೀಡಿದೆ. ಇದೇ 17ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‍ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ 40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ವಿರೂಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿಯ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು. ಗುರುವಾರ ತಡ ರಾತ್ರಿ ಬೆಂಗಳೂರು ತಲುಪಿದ್ದ ಮಾಡಾಳ್ ವಿರೂಪಾಕ್ಷಪ್ಪ ಬಳಿಕ ತಲೆಮರೆಸಿಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸರು ಹಲವು ತಂಡಗಳಲ್ಲಿ ಅವರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.