`ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‍ನವರ ಕೈಗಳೇ ಕಪ್ಪಾಗಿವೆ-ಸಿಎಂ ಬೊಮ್ಮಾಯಿ

ಮೈಸೂರು ಮಾ.7 : `ಬಿಜೆಪಿಯದ್ದು ಶೇ 40ರಷ್ಟು ಕಮಿಷನ್ ಸಂಕಲ್ಪ ಯಾತ್ರೆ’ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುರುಗೇಟು ನೀಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಲು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, `ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‍ನವರ ಕೈಗಳೇ ಕಪ್ಪಾಗಿವೆ. ಅವರಿಗೆ ಭ್ರಷ್ಟಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಕಾಂಗ್ರೆಸ್ ನವರು ಶೇ.100 ರಷ್ಟು ಕಮಿಷನ್ ಪಡೆಯಬೇಕೆಂಬ ಉದ್ದೇಶದಿಂದ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಾ.9ರಂದು ಕಾಂಗ್ರೆಸ್‍ನಿಂದ ಬಂದ್‍ಗೆ ಕರೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘2 ಗಂಟೆ ಬಂದ್ ಎಂದರೆ ಏನರ್ಥ?’. ಯಾವತ್ತಾದರೂ ಇಂಥ ಬಂದ್ ಬಗ್ಗೆ ಕೇಳಿದ್ದೀರಾ. ಇದನ್ನು ಬಂದ್ ಎನ್ನುತ್ತಾರಾ? ಭ್ರಷ್ಟಾಚಾರ ಮಾಡಿದವರು, ಜೈಲಿಗೆ ಹೋಗಿ ಬಂದವರು ಕರೆ ಕೊಟ್ಟರೆ ಜನರ ಮುಂದೆ ನಡೆಯುತ್ತದೆಯೇ? ಈ ಬಂದ್‍ಗೆ ಯಾವ ಬೆಲೆಯೂ ಇಲ್ಲ. ಅಂದು ಪರೀಕ್ಷೆಗಳಿವೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ಇದು ಕಾಂಗ್ರೆಸ್‍ನವರಿಗೆ ಅರ್ಥವಾಗುವುದಿಲ್ಲ. ಬಂದ್ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶವೂ ಇದೆ’ ಎಂದರು.

‘ಲೋಕಾಯುಕ್ತವನ್ನು ಬಂದ್ ಮಾಡಿದ್ದೆ ಎಂಬುದನ್ನು ಬಿಜೆಪಿಯವರು ಸಾಬೀತುಪಡಿಸಿದರೆ ತಕ್ಷಣ ರಾಜೀನಾಮೆ ಕೊಡುತ್ತೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಲೋಕಾಯುಕ್ತ ಬಂದ್ ಮಾಡಲಿಲ್ಲ ಆದರೆ, ಹಲ್ಲುಗಳನ್ನೆಲ್ಲಾ ಕಿತ್ತು ಹಾಕಿದರು. ಹಲ್ಲು ಕಿತ್ತ ಮೇಲೆ ಇದ್ದರಷ್ಟು, ಇಲ್ಲದಿದ್ದರೆಷ್ಟು? ಸಿದ್ದರಾಮಯ್ಯ ತಮ್ಮ ಕಾಲದಲ್ಲೇಕೆ ಕೇಸ್‍ಗಳನ್ನು ಎಸಿಬಿಗೆ ವರ್ಗಾಯಿಸುತ್ತಿದ್ದರು?’ ಎಂದು ಪ್ರಶ್ನಿಸಿದರು. ಹಾಗೂ `ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗಣ್ಯರ ಆತಿಥ್ಯದ ಹೆಸರಿನಲ್ಲಿ ಆಗಿರುವ ಅಕ್ರಮದ ಕುರಿತು ದಾಖಲೆ ತರಿಸಿಕೊಂಡು ಪರಿಶೀಲಿಸುತ್ತೇನೆ. ಆರೋಪಗಳು ಸರಿ ಇದ್ದರೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಕಾಂಗ್ರೆಸ್‍ಗೆ ಹೇಗೆ ಸಲ್ಲುತ್ತದೆ ಹೇಳಿ? ಎಂದು ಪ್ರಶ್ನಿಸಿದ ಅವರು, ರಸ್ತೆಯಾಗಿದ್ದು ನಮ್ಮ ಸರ್ಕಾರದಲ್ಲಿ, ಮಾಡಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಸಿದ್ದರಾಮಯ್ಯ ಹೇಗೆ ಮಾಡುತ್ತಾರೆ? ಕಾಂಗ್ರೆಸ್‍ನವರ ಮಾತು ಕೇಳಿದರೆ ಜನ ನಗುತ್ತಾರೆ. ಹಾಗೆ ನೋಡಿದರೆ, ರಸ್ತೆ ವಿಸ್ತರಣೆ ಆಗಬೇಕೆಂಬ 20 ವರ್ಷಗಳ ಹಿಂದಿನಿಂದಲೂ ಇತ್ತು. ಪ್ರಸ್ತಾಪಕ್ಕೂ ಹಣ ಬಿಡುಗಡೆ ಮಾಡಿ ಅನುಷ್ಠಾನಕ್ಕೆ ತರುವುದಕ್ಕೂ ವ್ಯತ್ಯಾಸವಿದೆ’ ಎಂದು ತಿರುಗೇಟು ನೀಡಿದರು. ಹಾಗೂ ಇದೇ ವೇಳೆ ಅವರು ‘ಸಿದ್ದರಾಮಯ್ಯ ಹೆದ್ದಾರಿ ಪರಿಶೀಲನೆ ನಡೆಸಲು ನಮ್ಮ ತಕರಾರೇನಿಲ್ಲ. ಈಗಾಗಲೇ ಅಲ್ಲಿ ಸಾವಿರಾರು ಜನರು ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು’ ಎಂದರು.

Leave a Reply

Your email address will not be published. Required fields are marked *

error: Content is protected !!