ಲಂಚ ಬೇಡಿಕೆ ಪ್ರಕರಣ: ಸ್ಮಾರ್ಟ್ ವಾಚ್ ಮೂಲಕ ಪ್ರಶಾಂತ್ ಮಾಡಾಳ್ ನನ್ನು ಕೆಡ್ಡಗೆ ಕೆಡವಿದ ಲೋಕಾಯುಕ್ತ
ಬೆಂಗಳೂರು ಮಾ.6 : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ಲಂಚದ ಬೇಡಿಕೆ ಪ್ರಕರಣಕ್ಕೆ ಸಂಬಂಧಿಸಿ ಕುತೂಹಕಾರಿ ವಿಷಯವೊಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಲಂಚದ ಬೇಡಿಕೆ ಹಾಗೂ ಈ ಕುರಿತ ವ್ಯವಹಾರದ ಮಾತುಕತೆಯ ಬಗ್ಗೆ ಸ್ಮಾರ್ಟ್ ವಾಚ್ ನಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಕೆಲವೆ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಿದ್ದು ನೀತಿ ಸಂಹಿತೆ ಜಾರಿಯಾದಲ್ಲಿ ತಮಗೆ ವರ್ಕ್ ಆರ್ಡರ್ ಸಿಗುವುದು ಕಷ್ಟ ಎಂದು ಆ ಉದ್ಯಮಿಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಹಾಗಾಗಿ ಈ ಕುರಿತು ಪ್ರಶಾಂತ್ ಮಾಡಾಳ್ ಅವರೊಂದಿಗೆ ಮಾತುಕತೆ ನಡೆಸಲು ಅವರು ಮುಂದಾಗಿದ್ದರು. ಮಾತುಕತೆ ಸಂದರ್ಭದಲ್ಲಿ ರೆಕಾರ್ಡಿಂಗ್‍ಗಳನ್ನು ತಡೆಯಲು ಬಿಗಿ ಭದ್ರತೆ ಮಾಡಿದ್ದರು. ಮೊಬೈಲ್ ಫೋನ್‍ಗಳು ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಚೇರಿ ಒಳಗೆ ತರಲು ಬಿಡುತ್ತಿರಲಿಲ್ಲ. ಅಲ್ಲದೆ ಈ ವಿಷಯದ ಕುರಿತು ಮೆಸೇಜ್ ಮತ್ತು ವಾಟ್ಸಾಪ್ ಮಾಡಬಾರದು ಎಂದು ತಾಕೀತು ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಹಾಗಾಗಿ ಉದ್ಯಮಿ ಶ್ರೇಯಸ್ ಕಶ್ಯಪ್ ರವರು ಫೆಬ್ರವರಿ ತಿಂಗಳಿನಲ್ಲಿ ಕೆಎಸ್‍ಡಿಎಲ್ ಪರ್ಚೆಸ್ ಆರ್ಡರ್ ಕುರಿತ ಪ್ರಶಾಂತ್ ಮಾಡಾಳ್ ರೊಂದಿಗಿನ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲು ಟೆಕ್ನೋ ವ್ಯೂ ಸ್ಮಾರ್ಟ್-ವಾಚ್ ಅನ್ನು ಬಳಸಿದ್ದಾರೆ. ಆ ಎಲ್ಲಾ ರೆಕಾರ್ಡಿಂಗ್‍ಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನೊಂದಿಗೆ ಲಗತ್ತಿಸಿದ್ದಾರೆ. ಆ ನಂತರದ ಮಾತುಕತೆಯಲ್ಲಿ 1.2 ಕೋಟಿಯಿಂದ 81 ಲಕ್ಷ ರೂ ಲಂಚಕ್ಕೆ ಪ್ರಶಾಂತ್ ಮಾಡಾಳ್ ಒಪ್ಪಿಕೊಂಡಿದ್ದು, ಆರಂಭಿಕವಾಗಿ ಮಾರ್ಚ್ 2ರಂದು 40 ಲಕ್ಷ ರೂ ನೀಡುವಾಗಿ ಪ್ರಶಾಂತ್ ಮಾಡಾಳ್ ಮತ್ತು ಆತನ ಸಹಚರರು ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿಮಿಟಿಡ್‍ನ ಅಧ್ಯಕ್ಷರೂ ಸಹ ಆಗಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿರುವ ಅವರು ಪುತ್ರ ಮಾಡಾಳ್ ಪ್ರಶಾಂತ್ ನಿಯೋಜನೆ ಮೇಲೆ ಬಿಡಬ್ಲೂಎಸ್‍ಎಸ್‍ಬಿಯಲ್ಲಿ (ಬೆಂಗಳೂರು ಜಲಮಂಡಳಿ) ಮುಖ್ಯ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರು ತಮ್ಮ ತಂದೆಯ ಹೆಸರಿನಲ್ಲಿ ಕೆಎಸ್‍ಡಿಎಲ್‍ಗೆ ಕಚ್ಛಾ ಸಾಮಾಗ್ರಿಗಳ ಪೂರೈಕೆ ಮಾಡುವ ಉದ್ಯಮಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಕೆಎಸ್‍ಡಿಎಲ್‍ಗೆ ಕಚ್ಚಾ ಸಾಮಾಗ್ರಿಗಳ ಪೂರೈಕೆಗಾಗಿ 4.8 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆ ಟೆಂಡರ್ ಅನ್ನು ಜನವರಿ 23 ರಂದು ಹೊರಡಿಸಲಾಗಿತ್ತು. ಕೆಮಿಕ್ಸಿಲ್ ಕಾರ್ಪೊರೇಷನ್ ಕಂಪನಿಯ ಉದ್ಯಮಿ ಶ್ರೇಯಸ್ ಕಶ್ಯಪ್ ಎಂಬುವವರು ತಮ್ಮ ಮತ್ತು ತಮ್ಮ ಸಹವರ್ತಿ ಸಂಸ್ಥೆ ಡೆಲಿಸಿಯಾ ಕಾರ್ಪೊರೇಶನ್ ವತಿಯಿಂದ ಆ ಟೆಂಡರ್ ಪಡೆದುಕೊಂಡಿದ್ದರು. ಆ ಪ್ರಕಾರ ಕೆಎಸ್‍ಡಿಎಲ್‍ಗೆ 5,100 ಕೆಜಿ ಗ್ವಾಯಾಕ್ ವುಡ್ ಎಣ್ಣೆ ಮತ್ತು 29,520 ಕೆಜಿ ಅಬ್ಬಲಿಡ್ ಅನ್ನು ಪೂರೈಕೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದರು. ಅದಕ್ಕೆ ಪರ್ಚೇಸ್ ಆರ್ಡರ್ ನೀಡಲು ಪ್ರಶಾಂತ್ ಮಾಡಾಳ್ ಒಟ್ಟು 1.2 ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂದು ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ ಯಾವುದೇ ವ್ಯಾಪಾರದ ಅನುಭವವಿಲ್ಲದ ಪ್ರಶಾಂತ್ ಅವರ ಸ್ನೇಹಿತರು ನಡೆಸುತ್ತಿರುವ ಡಿಎಫ್‍ಎ ಸೋಪ್ ನೂಡಲ್ಸ್‍ನಂತಹ ಸಂಸ್ಥೆಗಳಿಗೆ ಶೇಕಡಾ 50 ಕ್ಕಿಂತ ಹೆಚ್ಚು ಲಾಭಾಂಶದಲ್ಲಿ ಇತರ ಕಚ್ಚಾ ವಸ್ತುಗಳ ಪೂರೈಕೆಯ ಗುತ್ತಿಗೆಯನ್ನು ಕೆಎಸ್‍ಡಿಎಲ್ ನೀಡಿದೆ. ಅವರು ಕಾನೂನು ಬಾಹಿರವಾಗಿ ಉಪ ಗುತ್ತಿಗೆ ನೀಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.