ಅಣ್ಣಾಮಲೈ ಕಾರ್ಯಕರ್ತರ ಮೇಲೆ ಕಣ್ಗಾವಲು- ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ರಾಜಿನಾಮೆ

ಚೆನ್ನೈ ಮಾ.6 : ತಮಿಳುನಾಡು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಸಿಟಿಆರ್ ನಿರ್ಮಲ್ ಕುಮಾರ್ ಅವರು ರಾಜಿನಾಮೆ ನೀಡಿದ ಬೆನ್ನಲ್ಲೇ ಎಐಎಡಿಎಂಕೆಗೆ ಸೇರ್ಪಡೆಗೊಂಡಿದ್ದಾರೆ.

ರಾಜಿನಾಮೆ ಬಳಿಕ ಎಐಎಡಿಎಂಕೆ ಅಧ್ಯಕ್ಷ ಕೆ. ಪಳನಿಸ್ವಾಮಿ ಅವರನ್ನು ಭೇಟಿಯಾದ ಅವರು ಕೂಡಲೇ ಆ ಪಕ್ಷಕ್ಕೆ ಪಕ್ಷಾಂತರ ಗೊಂಡಿದ್ದಾರೆ. ಈ ನಡುವೆ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ವಿರುದ್ಧ ಹೇಳಿಕೆಯೊಂದನ್ನು ನೀಡಿರುವ ಅವರು, ‘ಪಕ್ಷದ ಕಾರ್ಯಕರ್ತರ ಕುರಿತು ರಾಜ್ಯ ನಾಯಕರಿಗೆ ಸ್ವಲ್ಪವೂ ಗೌರವ ಇಲ್ಲ. ಪಕ್ಷದ ಕಾರ್ಯಕರ್ತರ ಮೇಲೆಯೇ ಅಣ್ಣಾಮಲೈ ಅವರು ‘ಕಣ್ಗಾವಲು’ ಇರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇನ್ನು ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ ಅವರ ಆಪ್ತ ಅಮರ್ ಪ್ರಸಾದ್ ರೆಡ್ಡಿ ಅವರು, ಕುಮಾರ್ ಅವರ ‘ಕಣ್ಗಾವಲು’ ಆರೋಪವನ್ನು ಅಲ್ಲಗಳೆದಿದ್ದಾರೆ ಹಾಗೂ ‘ಕುಮಾರ್ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ’ ಎಂದಿದ್ದಾರೆ.

ಅದೇ ವೇಳೆ, ನಿರ್ಮಲ್ ಕುಮಾರ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, “ನಿಮಗೆ ಒಳ್ಳೆಯದಾಗಲಿ ಸಹೋದರ, ನೀವು ಹೋದಲ್ಲೆಲ್ಲಾ ಯಶಸ್ಸು ಸಿಗಲಿ” ಎಂದು ಹಾರೈಸಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!