ಸಿದ್ದರಾಮಯ್ಯ ವಿರುದ್ಧ ಹೇಳಿಕೆ:ಸಚಿವ ಅಶ್ವತ್ಥನಾರಾಯಣರನ್ನು ಬಂಧಿಸದಿದ್ದರೆ ಮಾ.10ರಂದು ಪ್ರತಿಭಟನೆ
ಬೆಂಗಳೂರು ಮಾ.4 : `ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದುಹಾಕಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಅಶ್ವತ್ಥನಾರಾಯಣ ಅವರನ್ನು 8 ದಿನಗಳೊಳಗೆ ಬಂಧಿಸಬೇಕು. ಇಲ್ಲದಿದ್ದರೆ, ಮಾ.10ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಅವರು ಮಾತನಾಡಿ, `ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದುಹಾಕಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಅಶ್ವತ್ಥನಾರಾಯಣ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ಸಚಿವ ರನ್ನು ಬಂಧಿಸಬೇಕು. ನಿರ್ಲಕ್ಷ್ಯ ವಹಿಸಿದ ಮಂಡ್ಯ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ವೇಳೆ `ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಅವರು ಮಾತನಾಡಿ, ‘ಪದೇ ಪದೇ ಅಸಾಂವಿಧಾನಿಕ ಮಾತುಗಳ ಮೂಲಕ ಸಿದ್ದರಾಮಯ್ಯ ಅವರನ್ನು ಅವಮಾನಿಸುತ್ತಿರುವ ಶಾಸಕ ಸಿ.ಟಿ. ರವಿ, ಕೆ.ಎಸ್ ಈಶ್ವರಪ್ಪ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯ ಅವರಿಗೆ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲನಾ ಸಮಿತಿ ಸದಸ್ಯ ಬಿ.ಟಿ. ಲಲಿತಾನಾಯಕ್, ಒಕ್ಕೂಟದ ಸಂಚಲನಾ ಸಮಿತಿ ಸದಸ್ಯ ಅನಂತನಾಯ್ಕ, ಒಕ್ಕೂಟದ ಸಂಚಾಲಕ ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಸದಸ್ಯರಾದ ಎನ್.ವಿ. ನರಸಿಂಹಯ್ಯ, ಸುರೇಶ್ ಎಂ. ಲಾತೋರ್, ಎನ್. ಅನಂತನಾಯ್ಕ, ಜೆ.ಡಿ. ಗೋಪಾಲ್ ಇದ್ದರು.